ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗೆ ಕೆಲವೊಂದು ಕೊಡುಗೆ ಪ್ರಕಟಿಸಿದರೂ ಅದು ಸರಿಯಾಗಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಅಸೆಂಬ್ಲಿ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕರಾವಳಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ, ಅದಕ್ಕೆ ೨,೫೦೦ ಕೋಟಿ ರು. ನೀಡುವುದಾಗಿ ಹೇಳಿತ್ತು. ತನ್ನ ಪ್ರಜಾಧ್ವನಿ ಯಾತ್ರೆ ಸಂದರ್ಭ ಇದನ್ನು ಗಟ್ಟಿಯಾಗಿ ಹೇಳಿತ್ತು. ಇದರಿಂದ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಬಜೆಟ್‌ನಲ್ಲಿ ಬಂದೂ ಇಲ್ಲ, ಇಲ್ಲಿವರೆಗೆ ಅಂತಹ ದೊಡ್ಡ ಮೊತ್ತವನ್ನೇನೂ ಘೋಷಿಸಿಯೂ ಇಲ್ಲ.ಮಂಗಳೂರಿನಲ್ಲಿ ಜವುಳಿ ಪಾರ್ಕ್ ಸ್ಥಾಪಿಸಿ ೧ ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವುದಾಗಿ ಕಾಂಗ್ರೆಸ್ ಹೇಳಿದ್ದ ಗ್ಯಾರಂಟಿ ಕಾರ್ಯಕ್ರಮ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಗೊಳ್ಳಬಹುದೇ ಎಂಬ ಕುತೂಹಲವಿದೆ.
ಮಂಗಳೂರಿನ ಹಳೆ ಬಂದರು ಸಮೀಪದ ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಮೂಲಕ ಬೋಟ್‌ಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಮೀನುಗಾರರ ಬೇಡಿಕೆ. ಈ ಬಾರಿಯಾದರೂ ಡ್ರೆಜ್ಜಿಂಗ್‌ಗೆ ಗರಿಷ್ಠ ಮೊತ್ತ ಸಿಗಬೇಕು ಎಂಬ ನಿರೀಕ್ಷೆ ಮೀನುಗಾರರಲ್ಲಿದೆ.ಫಲ್ಗುಣಿ ಹಾಗೂ ನೇತ್ರಾವತಿ ನದಿ ಪಾತ್ರದಲ್ಲಿ ಬಾರ್ಜ್ ಸೇವೆ ಆರಂಭ, ಮಂಗಳೂರು- ಕಾರವಾರ-ಗೋವಾ ಮುಂಬಯಿ ಜಲಮಾರ್ಗ ಸ್ಥಾಪನೆ ಇತ್ಯಾದಿಗಳನ್ನು ಜಾರಿಗೊಳಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಹೇಳಿರುವುದು ಇದುವರೆಗೆ ಕಾರ್ಯಗತವಾಗಿಲ್ಲ. ಇವುಗಳನ್ನು ಈ ಬಾರಿಯಾದರೂ ಜಾರಿಗೊಳಿಸುವ ಬೇಡಿಕೆ ಪ್ರವಾಸಿಗರದ್ದು.
ಇದುವರೆಗೆ ಕುಮ್ಕಿ ಹಕ್ಕು ನೀಡುವ ಬಗ್ಗೆ ಸರ್ಕಾರ ಯಾವುದೇ ಭರವಸೆ ನೀಡಿಲ್ಲ. ಲಕ್ಷಾಂತರ ಮಂದಿ ಕೃಷಿಕರು ಇದರ ನಿರೀಕ್ಷೆಯಲ್ಲಿದ್ದರೂ ಬಜೆಟ್‌ನಲ್ಲಿ ಘೋಷಿಸಿ ಅನುಷ್ಠಾನಕ್ಕೆ ಬರುತ್ತಿಲ್ಲ.ಈಡೇರದ ಐಟಿ ಪಾರ್ಕ್ ಬೇಡಿಕೆ:
ಮಂಗಳೂರಿನ ಹಲವು ವರ್ಷಗಳ ಬೇಡಿಕೆ ಆಗಿಯೇ ಉಳಿದಿರುವುದು ಐಟಿ ಪಾರ್ಕ್. ಮಂಗಳೂರಿನಲ್ಲಿ ಐಟಿ ನಿರ್ಮಾಣ ಮಾಡುವುದಾಗಿ ಹಿಂದಿನ ಸರ್ಕಾರಗಳು ಹೇಳಿತ್ತಾದರೂ ಘೋಷಣೆ ಮಾಡಿರಲಿಲ್ಲ. ಈ ಬಾರಿಯಾದರೂ ಆಗಬಹುದೇ ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ ರಚನೆ ಘೋಷಣೆಯಾದರೂ ಕಾರ್ಯಗತಗೊಂಡಿಲ್ಲ.
ಈ ಬಾರಿಯ ನಿರೀಕ್ಷೆ:-ಅಡಕೆ ಕೃಷಿಕರು ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗ ನಿರಂತರವಾಗಿ ಬಾಧಿಸುತ್ತಿದ್ದರೂ ಅದಕ್ಕೆ ಶಾಶ್ವತ ಪರಿಹಾರದತ್ತ ಸರ್ಕಾರಗಳು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಮಣ್ಣು ಪರೀಕ್ಷಾ ಕೇಂದ್ರವನ್ನು ದ.ಕ. ಜಿಲ್ಲೆಯಲ್ಲಿ ಸ್ಥಾಪಿಸುವ ಬಗ್ಗೆ ರೈತರ ಬೇಡಿಕೆ ಇದೆ.
-ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬೇಡಿಕೆ ಈ ಬಾರಿ ಈಡೇರುವ ನಿರೀಕ್ಷೆ.-ರಬ್ಬರ್ ಬೆಳೆಗಾರರ ಹಿತರಕ್ಷಣೆಗೆ ಸೂಕ್ತ ಯೋಜನೆ,
- ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಸರ್ಕ್ಯೂಟ್ ರಚನೆ.-ಮೀನುಗಾರಿಕೆಗೆ ಅನುಕೂಲವಾಗಲು ಹೂಳೆತ್ತುವಿಕೆ, ಸಣ್ಣ ಬಂದರುಗಳ ಅಭಿವೃದ್ಧಿ.