ಸಾರಾಂಶ
ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರಿಗೆ ನಿವೃತ್ತಿಯ ಸಮಯ ಬಂದಿದ್ದು, ತಾವಾಗಿಯೇ ನಿವೃತ್ತಿ ಆಗಬೇಕು. ಇಲ್ಲವಾದರೆ, ಜನರೇ ಅವರನ್ನು ಮನೆಗೆ ಕಳುಹಿಸುವ ಮೂಲಕ ನಿವೃತ್ತಿ ಮಾಡಲಿದ್ದಾರೆ ಎಂದು ಶಾಸಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಸಿದ್ದರಾಮಯ್ಯ ನಾಟಕ ಕಂಪನಿ ದೆಹಲಿಗೆ ಹೋಗಿತ್ತು. ಕೇವಲ ನಾಟಕ ಮಾಡುವುದೇ ಅವರ ಕಾಯಕವಾಗಿದೆ ಎಂದು ಟೀಕಿಸಿದರು.ಪ್ರಧಾನಿ ಮೋದಿ ಅವರು ಅತಿ ಹೆಚ್ಚು ಅನುದಾನ ನೀಡುವ ಮೂಲಕ ಕರ್ನಾಟಕದ ಪರವಾಗಿದ್ದಾರೆ. ಸಿದ್ದರಾಮಯ್ಯ ಅನುದಾನದ ವಿಷಯದಲ್ಲಿ ಸುಮ್ಮನೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಮನೆಗೆ ನೀರು ಬರದಿದ್ದರೂ ಪ್ರಧಾನಿ ಮೋದಿ ಮೇಲೆ ಆರೋಪಿಸುತ್ತಾರೆ. ಸಿದ್ದರಾಮಯ್ಯನವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆರೋಪಿಸಿದರು.
ಚುನಾವಣೆ ಗಿಮಿಕ್‌ಗಾಗಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಅವರು ನೀಡಿದ ಗ್ಯಾರಂಟಿಗೆ ವಾರಂಟಿಯೇ ಇಲ್ಲ. ಅದರಿಂದ ಕಾಂಗ್ರೆಸ್ ಅಳಿವಿನಂಚಿಗೆ ಬಂದು ನಿಂತಿದೆ. ಒಂದೇ ಸಮುದಾಯಕ್ಕೆ 10 ಸಾವಿರ ಕೋಟಿ ಕೊಡ್ತೇನೆ ಎಂದು ಸಿದ್ದರಾಮಯ್ಯ ಅಬ್ಬರಿಸಿದ್ದಾರೆ. ಬೆಂಗಳೂರಿನವರು ಕೇವಲ ಬೆಂಗಳೂರು ಅಭಿವೃದ್ಧಿ ಆಗಲಿ ಎಂದರೆ, ಇತರರು ಏನು ಮಾಡಬೇಕು? ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಲೋಕಸಭಾ ಚುನಾವಣೆಯಲ್ಲಿ ಮತ ಹಾಕದಿದ್ದಲ್ಲಿ, ಗ್ಯಾರಂಟಿ ಹಿಂಪಡೆಯುವ ಬೆದರಿಕೆಯನ್ನು ಸಿದ್ದರಾಮಯ್ಯ ಹಾಕುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕೆ ಸಿದ್ದರಾಮಯ್ಯ ಮನೆಗೆ ಬಂದಾಗ ತಕ್ಕ ಉತ್ತರ ಕೊಡಲು ಜನತೆ ಕಾಯುತ್ತಾ ಕುಳಿತಿದ್ದಾರೆ. ರಾಜ್ಯದಲ್ಲಿ ಈ ಬಾರಿ 28ಕ್ಕೆ 28 ಲೋಕಸಭಾ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.