ಆಶ್ಲೇಷಾ ವರ್ಷಧಾರೆಗೆ ತೊಗರಿ ಕಣಜ ತತ್ತರ: ರಸ್ತೆ - ಸೇತುವೆ ಜಲಾವೃತ

| Published : Aug 08 2025, 01:00 AM IST

ಆಶ್ಲೇಷಾ ವರ್ಷಧಾರೆಗೆ ತೊಗರಿ ಕಣಜ ತತ್ತರ: ರಸ್ತೆ - ಸೇತುವೆ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಬಹುತೇಕ ಕಡೆಗಳಲ್ಲಿ ಗುರುವಾರ ಬೆಳಗಿನ ಒಂದೂವರೆ ಗಂಟೆ ಕಾಲ ಬಿರುಸಿನಿಂದ ಸುರಿದ ಆಶ್ಲೇಷಾ ಮಳೆಗೆ ತೊಗರಿ ಕಣಜ ಕಲಬುರಗಿ ತತ್ತರಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಬಹುತೇಕ ಕಡೆಗಳಲ್ಲಿ ಗುರುವಾರ ಬೆಳಗಿನ ಒಂದೂವರೆ ಗಂಟೆ ಕಾಲ ಬಿರುಸಿನಿಂದ ಸುರಿದ ಆಶ್ಲೇಷಾ ಮಳೆಗೆ ತೊಗರಿ ಕಣಜ ಕಲಬುರಗಿ ತತ್ತರಿಸಿದೆ.

ಬೆಳಗಿನ ಹೊತ್ತು 10 ರಿಂದ 11. 30 ರವರೆಗೆ ಭಾರಿ ಮಳೆ ಸುರಿದಿದ್ದರಿಂದ ಜೆಲ್ಲೆಯ ಹಳ್ಳಕೊಳ್ಳ ತುಂಬಿ ಹರಿಯುತ್ತಿದೆ. ಅಫಜಲ್ಪುರ, ಕಲಬುರಗಿ ತಾಲೂಕಿನಲ್ಲಿ ಸುರಿದ ಮಳೆಗೆ ಹಳ್ಳಗಳ ನೀರು ರಸ್ತೆಗೆ ನುಗ್ಗಿದ್ದರಿಂದ ಅನೇಕ ಹಳ್ಳಿಗಳ ಸಂಚಾರ ಕಡಿತಗೊಂಡಿದೆ. ಅಫಜಲ್ಪುರ ತಾಲೂಕಿನ ಮಣ್ಣೂರು, ಕರಜಗಿ ಸಂಪರ್ಕ, ಮಣ್ಣೂರು- ಇಂಡಿ ಸಂಪರ್ಕ, ಮಣ್ಣೂರು- ಹೊಸೂರು ಸಂಪರ್ಕ ಕಡಿತಗೊಂಡಿದೆ.

ಭಾರಿ ಪ್ರಮಾಣದಲ್ಲಿ ನೀರು ಮಣ್ಣೂರು ಹೊರವಲಯದಲ್ಲಿರುವ ಕಿರಿ ಹಳ್ಳ, ಗೋಕಟ್ಟೆಗಳಿಂದ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಇಡೀ ದಿನ ಬಂದ್‌ ಇರುವ ಸಾಧ್ಯತೆಗಳಿವೆ.

ಅಫಜಲ್ಪುರದಲ್ಲಿ ಗುರುವಾರ ಬೆಳಗ್ಗೆ ಸುರಿದ ಮಳೆ ಸರಾಸರಿಗಿಂತ 40 ಮಿ.ಮಿ ಹೆಚ್ಚಿಗೆ ಸುರಿದಿದೆ. ಅಫಜಲ್ಪುರ-121 ಮಿ.ಮಿ, ಆತನೂರ್‌-133 ಹಾಗೂ ಕರಜಗಿ 100 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.

ಇನ್ನು ಕಲಬುರಗಿ ಹಾಗೂ ಆಳಂದದಲ್ಲಿಯೂ ಒಂದೂವರೆಗಂಟೆಗೂ ಹೆಚ್ಚಿನ ಅವಧಿ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಲಬುರಗಿ ತಾಲೂಕಿನಲ್ಲಿಯೂ ಮಳೆ ಬಿರುಸಿನಿಂದ ಸುರಿದಿದೆ. ಮೇಳಕುಂದಾ, ಕಣ್ಣಿ ಸೇರಿದಂತೆ ಹಲವು ಗ್ರಾಮಗಳ ಮುಂದಿನ ಹಳ್ಳಕೊಳ್ಳ ರಭಸದಿಂದ ಪ್ರವಹಿಸುತ್ತಿವೆ. ಇಲ್ಲಿಯೂ ಸಂಚಾರಕ್ಕೆ ಸಂಚಕಾರ ಬಂದಿದೆ.

ಆಳಂದದಲ್ಲಿಯೂ ಬಿರುಸಿನ ಮಳೆಗೆ ಹೊಲಗದ್ದೆಗಳು ಕೆರೆಯಂತಾಗಿವೆ. ಇಲ್ಲಿಯೂ ತೊಗರಿ ಹತ್ತಿ ಹಾಳಾಗಿದೆ. ಹೆಸರು, ಉದ್ದು ಕೂಡಾ ಭಾರಿ ಮಳೆ ಹೊಡೆತಕ್ಕೆ ತತ್ತರಿಸಿವೆ.

ಬಿತ್ತಲ್ಪಟ್ಟ ತೊಗರಿ, ಹತ್ತಿ, ಸೂರ್ಯಕಾಂತಿ ನೀರುಪಾಲು!

ಕಳೆದ ವಾರವಷ್ಟೇ ರೈತರು ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆ ಬಿತ್ತಿದ್ದರು. ಅಪಾರ ಹಣ ವೆಚ್ಚ ಮಾಡಿ ಬೀಜ, ಗೊಬ್ಬರ ಹಾಕಿದ್ದರು. ಬೆಳೆಗಳೂ ಮೊಳಕೆಯೊಡೆದಿದ್ದವು. ಆದರೆ, ಏಕಾಏಕಿ ಸುರಿದ ಬಿರುಸಿನ ಮಳೆಗೆ ಹೊಲಗದ್ದೆಗಳೆಲ್ಲವೂ ಜಲಾವೃತಗೊಂಡಿದ್ದು, ಬಿತ್ತಿದ್ದೆಲ್ಲವೂ ನೀರುಪಾಲಾಗಿದೆ.

ಮಣ್ಣೂರಿನ ರೈತ ಬಸವರಾಜ ಅಲ್ಲಾಪೂರ ತಮ್ಮ 15 ಎಕರೆ ಹೊಲದಲ್ಲಿ ತೊಗರಿ ಬಿತ್ತಿದ್ದರು. ಇದೀಗ ಇಡೀ ಹೊಲ ಮಳೆ ನೀರು ತುಂಬಿಕೊಂಡಿದ್ದರಿಂದ ಆತಂಕದಲ್ಲಿದ್ದಾರೆ. ಬಿತ್ತನೆಗೆ ವೆಚ್ಚ ಮಾಡಿದ್ದೆಲ್ಲವೂ ನೀರುಪಾಲಾಯಿತು ಎಂದು ಕನ್ನಡಪ್ರಭಕ್ಕೆ ಅಲ್ಲಾಪೂರ ತಿಳಿಸಿದರು.

ಹೊಸೂರ ಮಣ್ಣೂರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 10ಗಂಟೆಗೆ ಸುರಿದ ಧಾರಾಕಾರ ಮಳೆಗೆ ಮಣ್ಣೂರದಿಂದ ಕರಜಗಿಗೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿರುವ ಕಿರಹಳ್ಳದ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಮಣ್ಣೂರದಿಂದ ಕರಜಗಿಗೆ ಹೋಗುವ ರಸ್ತೆ ಸಂಚಾರ ಬಂದ್ ಆಗಿದೆ.