ಪರಿಶಿಷ್ಟರ ಅಭಿವೃದ್ಧಿಗೆ ಮಾತ್ರ ಹಣ ಬಳಸಿ

| Published : Aug 08 2025, 01:00 AM IST

ಪರಿಶಿಷ್ಟರ ಅಭಿವೃದ್ಧಿಗೆ ಮಾತ್ರ ಹಣ ಬಳಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆಂದು ಮೀಸಲಿಟ್ಟಿರುವ ಹಣವನ್ನು ಪರಿಶಿಷ್ಟರ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು.ಎಂದು ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ, ತುಮಕೂರು ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆಂದು ಮೀಸಲಿಟ್ಟಿರುವ ಹಣವನ್ನು ಪರಿಶಿಷ್ಟರ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ಎಸ್.ಸಿ.ಪಿ, ಟಿಎಸ್ಪಿ ಕಾಯ್ದೆಯ ಕಲಂ 7ಎ ರದ್ದುಗೊಳಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಬೇಕು ಎಂದು ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ, ತುಮಕೂರು ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ, ಸರಕಾರಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುಧಾನ ಮೀಸಲಿಟ್ಟು, ಅದನ್ನು ಪ್ರತಿವರ್ಷ ಬಳಕೆ ಮಾಡಲೇಬೇಕೆಂಬ ಉದ್ದೇಶದಿಂದ ಎಸ್.ಸಿ,ಎಸ್ಪಿ ಮತ್ತು ಟಿ.ಎಸ್ಪಿ ಕಾಯ್ದೆ-2013 ಜಾರಿಗೆ ತರಲಾಗಿತ್ತು.ಆದರೆ ಕಾಯ್ದೆಯ ಕಲಂ 7ಡಿ ಮತ್ತು 7ಸಿ ಕಲಂಗಳನ್ನು ದುರುಪಯೋಗಪಡಿಸಿಕೊಂಡು ಪರಿಶಿಷ್ಟರ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 40 ಸಾವಿರ ಕೋಟಿ ರು.ಗಳನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.

ರಾಜ್ಯದ ಸುಮಾರು 38 ಇಲಾಖೆಗಳಲ್ಲಿ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ. ಇದುವರೆಗೂ ಒಳಮೀಸಲಾತಿ ಹೆಸರಿನಲ್ಲಿ ವಿಳಂಬ ಮಾಡಲಾಗಿದೆ. ಈಗಾಗಲೇ ನ್ಯಾ.ನಾಗಮೋಹನ್ ದಾಸ್ ವರದಿ ನೀಡಿದ್ದು, ಅವರ ಶಿಫಾರಸ್ಸಿನ ಅನ್ವಯ ಒಳಮೀಸಲಾತಿಯನ್ನು ಜಾರಿಗೊಳಿಸುವುದರ ಜೊತೆಗೆ, ತಕ್ಷಣವೇ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ, ಪರಿಶಿಷ್ಟ ಔದ್ಯೋಗಿಕ ಅಭಿವೃದ್ದಿಗೆ ಮುಂದಾಗಬೇಕು. ಸರಕಾರ ಎಸ್ಪಿ,ಎಸ್ಪಿ ಮತ್ತು ಟಿಎಸ್ಪಿ ಅನುದಾನ ದುಬರ್ಳಕೆ ಮಾಡಿಕೊಳ್ಳುವುದು ಮುಂದುವರೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ನಿಟ್ಟೂರು ರಂಗಸ್ವಾಮಿ ತಿಳಿಸಿದರು.

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ತಿಟಪೂರು ರವೀಶ್‌ಗೌಡ, ಸಿ.ಜೆ.ತಿಪ್ಪೇಸ್ವಾಮಿ,ಮರಳೂರು ಕೃಷ್ಣಮೂರ್ತಿ, ಕೇಬಲ್ ರಘು,ದೊಡ್ಡೇರಿ ಕಣಿಮಯ್ಯ,ನರಸಯ್ಯ ಮಲ್ಲಾಪುರ, ಗಾಂಧಿರಾಜ್ ಹೆಬ್ಬೂರು,ಲಕ್ಷ್ಮಿಕಾಂತ್ ಶಿರಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.