ತಾಲೂಕಿನ ನಲ್ಲಗುಟ್ಲಪಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನಡೆದಿರುವ ಅಕ್ರಮಗಳ ಸರಮಾಲೆಗೆ ಈಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖಾ ಆದೇಶ ಹೊಸ ತಿರುವು ನೀಡಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿರುವ ಅತಿಥಿ ಶಿಕ್ಷಕಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಿಇಒ ಕಳೆದ ಜುಲೈ 28ರಂದೇ ಸೂಚಿಸಿದ್ದರೂ, ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕಿ 2022-23 ನೇ ಸಾಲಿನಿಂದಲೇ ನಕಲಿ ಡಿ.ಎಡ್ ಅಂಕಪಟ್ಟಿ ಸೃಷ್ಟಿಸಿ ಅಕ್ರಮವಾಗಿ ಹುದ್ದೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ, ಚೇಳೂರು
ತಾಲೂಕಿನ ನಲ್ಲಗುಟ್ಲಪಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನಡೆದಿರುವ ಅಕ್ರಮಗಳ ಸರಮಾಲೆಗೆ ಈಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖಾ ಆದೇಶ ಹೊಸ ತಿರುವು ನೀಡಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿರುವ ಅತಿಥಿ ಶಿಕ್ಷಕಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಿಇಒ ಕಳೆದ ಜುಲೈ 28ರಂದೇ ಸೂಚಿಸಿದ್ದರೂ, ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕಿ 2022-23 ನೇ ಸಾಲಿನಿಂದಲೇ ನಕಲಿ ಡಿ.ಎಡ್ ಅಂಕಪಟ್ಟಿ ಸೃಷ್ಟಿಸಿ ಅಕ್ರಮವಾಗಿ ಹುದ್ದೆ ಪಡೆದಿದ್ದಾರೆ. ಈ ಕುರಿತು ಶಂಬೂಕ ಸಂಘರ್ಷ ಸಮಿತಿಯು ದಾಖಲೆ ಸಹಿತ ದೂರು ನೀಡಿದ ಹಿನ್ನೆಲೆಯಲ್ಲಿ, ಸಿಇಒ ನವೀನ್ ಭಟ್ ಅವರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಶಿಕ್ಷಕಿ ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟ ಉಂಟುಮಾಡಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಡಿಡಿ ಹಿಂಜರಿಕೆ:ಈ ಹಗರಣದ ಬಗ್ಗೆ ಸ್ಪಷ್ಟನೆ ಪಡೆಯಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯನ್ನು ''''''''ಕನ್ನಡಪ್ರಭ'''''''' ಸಂಪರ್ಕಿಸಿದಾಗ, ಹಾರಿಕೆ ಉತ್ತರ ನೀಡಿದರು. "ನಮಗೆ ಈ ಬಗ್ಗೆ ಮಾಹಿತಿ ಬಂದಿದೆ " ಎಂದು ಒಪ್ಪಿಕೊಂಡ ಅಧಿಕಾರಿ, ಹೆಚ್ಚಿನ ಮಾಹಿತಿ ನೀಡಲು ಮತ್ತು ತನಿಖೆ ಯಾವ ಹಂತದಲ್ಲಿದೆ ಎಂದು ತಿಳಿಸಲು ನಿರಾಕರಿಸಿದ್ದಾರೆ. ಸಿಇಒ ಆದೇಶ ನೀಡಿದ್ದರೂ ಕೆಳಮಟ್ಟದ ಅಧಿಕಾರಿಗಳು ಅದನ್ನು ಪಾಲಿಸದಿರುವುದು ಹಲವು ಅನುಮಾನ ಹುಟ್ಟುಹಾಕಿದೆ.ನಲ್ಲಗುಟ್ಲಪಲ್ಲಿ ಶಾಲೆಯ ಅತಿಥಿ ಶಿಕ್ಷಕಿಯ ನಕಲಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಆದರೆ ಪ್ರಸ್ತುತ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಈಗಲೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ನಾವು ಪರಿಶೀಲನೆ ನಡೆಸುತ್ತಿದ್ದೇವೆ. "
- ಪ್ರವೀಣ್ ಪಾಟೀಲ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿನಾವು ಎಲ್ಲಾ ಸಾಕ್ಷ್ಯಗಳ ಸಮೇತ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಗುವಿನ ಮೇಲೆ ಮರಣಾಂತಿಕ ಹಲ್ಲೆಯಾಗಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದರೂ ಅಧಿಕಾರಿಗಳು ಮೌನವಾಗಿರುವುದು ಅಮಾನವೀಯ. ಕೂಡಲೇ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಅಮಾನತುಗೊಳಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುತ್ತೇವೆ.- ಎಸ್. ಗಣೇಶ್, ದೂರುದಾರರುನಕಲಿ ಅಂಕಪಟ್ಟಿ ನೀಡಿ ಸರ್ಕಾರಕ್ಕೆ ಲಕ್ಷಾಂತರ ರು. ವಂಚಿಸಿರುವ ಶಿಕ್ಷಕಿಯನ್ನು ತಕ್ಷಣ ವಜಾಗೊಳಿಸಬೇಕು. ಸಿಇಒ ಅವರೇ ಆದೇಶ ನೀಡಿದ್ದರೂ ಕೆಳಮಟ್ಟದ ಅಧಿಕಾರಿಗಳು ಮಾಹಿತಿ ನೀಡಲು ಹಿಂಜರಿಯುತ್ತಿರುವುದು ಜಿಲ್ಲಾಡಳಿತಕ್ಕೆ ಮಾಡುತ್ತಿರುವ ಅವಮಾನ. ಈ ಬಗ್ಗೆ ನಾವು ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ.
- ಸಂಚಾಲಕರು, ಶಂಬೂಕ ಸಂಘರ್ಷ ಸಮಿತಿ