ಕಾಡು ಉಳಿದರೆ ನಾಡು ಉಳಿಯುತ್ತದೆ. ಹಾಗಾಗಿ ನಾವೆಲ್ಲರೂ ಕಾಡು, ಕಾಡು ಪ್ರಾಣಿಗಳ ಬಗ್ಗೆ ಹೆಚ್ಚು ಅರಿತುಕೊಂಡು ಮುನ್ನಡೆಯಬೇಕು.
ಹೊಸಪೇಟೆ: ಬೆಂಗಳೂರಿನಿಂದ ಬಂದು ನಾನು ಕಾಡಂಚಿನ ಜನತೆಗೆ ಕಾಡಿನ ಬಗ್ಗೆ ಹೇಳುವುದು ಏನಿಲ್ಲ. ವನ್ಯಜೀವಿಗಳ ಜೊತೆಗೆ ನಾವು ಸ್ನೇಹಬಾಂಧವ್ಯ ಹೊಂದಬೇಕು. ಈ ಕಾರ್ಯವನ್ನು ಬುಕ್ಕಸಾಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಕನ್ನಡಪ್ರಭ- ಏಶ್ಯಾ ನೆಟ್ ಸುವರ್ಣ ನ್ಯೂಸ್‌ನ ವನ್ಯಜೀವಿ ಸಂರಕ್ಷಣೆ ಅಭಿಯಾನದ ರಾಯಭಾರಿ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ -ಕನ್ನಡಪ್ರಭ ವತಿಯಿಂದ ವಿಜಯನಗರ ಅರಣ್ಯ ಇಲಾಖೆ, ಬುಕ್ಕಸಾಗರ ಗ್ರಾಪಂ ಸಹಯೋಗದಲ್ಲಿ ಅಲ್ಲಿನ ಪ್ರೌಢಶಾಲಾ ಆವರಣದಲ್ಲಿ ಬುಧವಾರ ನಡೆದ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಡು ಉಳಿದರೆ ನಾಡು ಉಳಿಯುತ್ತದೆ. ಹಾಗಾಗಿ ನಾವೆಲ್ಲರೂ ಕಾಡು, ಕಾಡು ಪ್ರಾಣಿಗಳ ಬಗ್ಗೆ ಹೆಚ್ಚು ಅರಿತುಕೊಂಡು ಮುನ್ನಡೆಯಬೇಕು ಎಂದರು.ಇದು ನಿಜಕ್ಕೂ ಅದ್ಭುತ ಕಾರ್ಯಕ್ರಮ ಆಗಿದೆ. ಇದು ಕಮರ್ಷಿಯಲ್ ಕಾರ್ಯಕ್ರಮ ಅಲ್ಲ. ಕಾಡು ಪ್ರಾಣಿಗಳು, ಕಾಡಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಿದೆ. ದರೋಜಿ ಕರಡಿಧಾಮದ ಪಕ್ಕದಲ್ಲೇ ಬರುವ ಬುಕ್ಕಸಾಗರ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಇಲಾಖೆಗಳ ಸಿಬ್ಬಂದಿಯೊಂದಿಗೂ ಸ್ನೇಹಬಾಂಧವ್ಯದಿಂದ ಇದ್ದೀರಾ ಎಂಬುದು ಹೆಮ್ಮೆ. ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆ ಹೊಂದಿದ್ದೀರಾ, ಕಾಡುಪ್ರಾಣಿಗಳ ಬಗ್ಗೆ ಅರಿತುಕೊಂಡಿದ್ದೀರಾ, ಈ ಜಾಗೃತಿ ಮೂಲಕ ಸಹಬಾಳ್ವೆ ನಡೆಸುತ್ತಿರುವುದು ಇತರರಿಗೂ ಮಾದರಿ ಎಂದರು.
ದರೋಜಿ ಕರಡಿಧಾಮಕ್ಕೆ ಖುದ್ದು ನಾನು ತೆರಳಿ ನೋಡಿರುವೆ. ಈ ಧಾಮದಲ್ಲಿ ಐದು ಕರಡಿಗಳನ್ನು ಕಣ್ಣಾರೆ ಕಂಡಿರುವೆ. ಈ ಧಾಮವನ್ನು ಚೆನ್ನಾಗಿ ಉಳಿಸಿಕೊಳ್ಳಲಾಗಿದೆ. ಗಿಡ, ಮರಗಳು, ಪ್ರಾಣಿ, ಪಕ್ಷಿಗಳು ಇವೆ. ಇದೊಂದು ಉತ್ತಮ ಧಾಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಮಕ್ಕಳು ಉತ್ತಮವಾಗಿ ಡ್ಯಾನ್ಸ್ ಮಾಡಿದ್ದೀರಾ, ಬರೀ ಡ್ಯಾನ್ಸ್‌ನಲ್ಲೇ ಉಳಿಯಬಾರದು. ನಾವು ಶಿಕ್ಷಣದ ಕಡೆಗೂ ಒತ್ತು ನೀಡಬೇಕು. ನಮಗೆ ಶಿಕ್ಷಣ ಮುಖ್ಯ ಎಂಬುದನ್ನು ಮರೆಯಬಾರದು. ಎಲ್ಲರೂ ಓದಿನ ಕಡೆಗೆ ಗಮನ ಹರಿಸಬೇಕು ಎಂದರು.
ಡಿಎಫ್‌ಒ ಎಚ್. ಅನುಪಮ ಮಾತನಾಡಿ, ದರೋಜಿ ಕರಡಿಧಾಮ ಏಷ್ಯಾದಲ್ಲೇ ಮೊದಲ ಕರಡಿಧಾಮ ಆಗಿದೆ. ವನ್ಯಜೀವಿಗಳ ಸಂರಕ್ಷಣೆ ಅತಿ ಮುಖ್ಯವಾಗಿದೆ. ಮಳೆ, ಗಾಳಿ, ನೀರಿಗಾಗಿ ನಮಗೆ ಕಾಡು ಮುಖ್ಯ. ಮುಂದೆ ಕೊರೋನಾದಂತಹ ಮಹಾಮಾರಿ ಬರಬಾರದು ಎಂದರೆ ಕಾಡು ಬೆಳೆಸೋಣ. ಕೃಷಿ ಫಲವತ್ತತೆಗೆ ಜೇನುನೋಣ, ಚಿಟ್ಟೆಗಳು ಪೂರಕ ಎಂಬುದನ್ನು ಅರಿಯೋಣ ಎಂದರು.ಸಮಾಜ ಸೇವಕ ಎಚ್.ಜಿ. ವಿರೂಪಾಕ್ಷಿ ಮಾತನಾಡಿ, ನಾವು ವನ್ಯಜೀವಿಗಳ ಬಗ್ಗೆ ಕಾಳಜಿ ಹೊಂದಬೇಕು. ನಾನು ಕೂಡ ಹತ್ತು ಎಕರೆ ಕಾಡು ಬೆಳೆಸಿರುವೆ. ಹಾಗಾಗಿ ರೈತರು ಚಿರತೆಗಳನ್ನು ಓಡಿಸಿಕೊಂಡು ನನ್ನ ಮನೆ ಸಮೀಪವೇ ಬಿಟ್ಟು ಹೋಗುತ್ತಾರೆ. ಚಿರತೆ ನಾಲ್ಕೈದು ದಿನಗಳವರೆಗೆ ಇದ್ದು, ತನ್ನ ಪಾಡಿಗೆ ತಾನು ಹೊರಟು ಹೋಗುತ್ತದೆ. ವಿಜಯನಗರ ಕ್ಷೇತ್ರದಲ್ಲಿ ಮುಕ್ಕಾಲು ಹಳ್ಳಿಗಳು ಕಾಡಂಚಿನಲ್ಲಿವೆ. ಮಾನವ-ಪ್ರಾಣಿ ಸಂಘರ್ಷ ತೀರಾ ಕಡಿಮೆ ಇದೆ. ಇದೇ ಹಾದಿಯಲ್ಲಿ ಸಾಗೋಣ ಎಂದರು.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ ಮಾತನಾಡಿ, ಕಾಡನ್ನು ಬುಕ್ಕಸಾಗರದ ಗ್ರಾಮದ ಜನತೆ ಪ್ರೀತಿಯಿಂದ ಬೆಳೆಸಿದ್ದಾರೆ. ರೈತರ ಬೆಳೆಗಳನ್ನು ಕರಡಿಗಳು ಹಾಳು ಮಾಡುತ್ತಿದ್ದಾಗ ಅರಣ್ಯ ಇಲಾಖೆಯವರು ಸೇತುವೆಗಳಿಗೆ ಗೇಟ್ ಮಾಡಿಸಿಕೊಟ್ಟಿದ್ದಾರೆ. ಬುಕ್ಕಸಾಗರದ ಕಾಡು ಹತ್ತು ವರ್ಷಗಳಲ್ಲಿ ಉತ್ತಮವಾಗಿ ಬೆಳೆದಿದೆ. ನಾವೆಲ್ಲರೂ ಕಾಡು ಬೆಳೆಸಲು ಸಹಕಾರ ನೀಡುತ್ತೇವೆ ಎಂದರು.ಗ್ರಾಪಂ ಅಧ್ಯಕ್ಷ ಹುಲಗಪ್ಪ, ಎಸಿಎಫ್ ಭಾಸ್ಕರ್, ವಲಯ ಅರಣ್ಯಾಧಿಕಾರಿ ಬಸವರಾಜ, ತಾಪಂ ಇಒ ಎಂ.ಬಿ. ಆಲಂ ಪಾಷಾ, ಪಿಡಿಒ ರಾಜೇಶ್ವರಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಜಗದೀಶ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ, ಸುವರ್ಣನ್ಯೂಸ್‌ನ ವಿನೋದ್ ನಾಯ್ಕ, ಶ್ರೀಧರ, ಮತ್ತಿತರರಿದ್ದರು.
ಬುಕ್ಕಸಾಗರ ಗ್ರಾಪಂಗೆ ಅತ್ಯುತ್ತಮ ಪ್ರಶಸ್ತಿ:ಬುಕ್ಕಸಾಗರ ಗ್ರಾಪಂಗೆ ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ನೀಡಿದರು. ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ದ್ವಾಪರ ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಮಕ್ಕಳು ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಕೈ ಎಳೆದು ಕುಣಿಯಲು ಪ್ರೇರೇಪಿಸಿದರು. ಹಾಗಾಗಿ ಅವರು ನಾಲ್ಕು ಬಾರಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಪೊಲೀಸರು ಬಂದೋಬಸ್ತ್ ನೀಡಿದರು.