ಗದಗ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮೂಲಕ ಮತದಾರರಿಂದ ಪೌರತ್ವದ ದಾಖಲೆಗಳನ್ನು ಕೇಳುವುದು ಅಸಂವಿಧಾನಿಕ ಕ್ರಮವಾಗಿದ್ದು, ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಜರ್ ಕೊಡ್ಲಿಪೇಟೆ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ದಲಿತರು ಹಾಗೂ ಅಲ್ಪಸಂಖ್ಯಾತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವುಗಳನ್ನು ಬಗೆಹರಿಸುವ ಬದಲು ಎಸ್‌ಐಆರ್ ಮೂಲಕ ಬಡವರ ಪೌರತ್ವವನ್ನೇ ಪ್ರಶ್ನಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.

ಸಂವಿಧಾನದ 324, 325 ಹಾಗೂ 326ನೇ ವಿಧಿಗಳ ಪ್ರಕಾರ ಚುನಾವಣಾ ಆಯೋಗಕ್ಕೆ ಮತದಾರರ ಹೆಸರು ಸೇರ್ಪಡೆ, ವರ್ಗಾವಣೆ ಹಾಗೂ ಮರಣ ಹೊಂದಿದವರ ಹೆಸರು ಕೈಬಿಡುವ ಅಧಿಕಾರ ಮಾತ್ರವಿದ್ದು, ಪೌರತ್ವದ ದಾಖಲೆಗಳನ್ನು ಕೇಳುವ ಅಧಿಕಾರ ಇಲ್ಲ ಎಂದು ಅವರು, ಎಸ್‌ಐಆರ್ ಜಾರಿಯಿಂದ ಬಿಎಲ್‌ಒಗಳ ಮೇಲೆ ಅತಿಯಾದ ಒತ್ತಡ ಉಂಟಾಗಿದ್ದು, ಕರ್ನಾಟಕದಲ್ಲಿ ನಾಲ್ವರು ಬಿಎಲ್‌ಒಗಳು ಇದುವರೆಗೂ ಮೃತಪಟ್ಟಿದ್ದಾರೆ, ಈ ಹಿಂದೆ ಎಸ್ಐಆರ್ ನಡೆದ ರಾಜ್ಯಗಳಲ್ಲಿಯೂ ಬಿಎಲ್ಒಗಳು ಸಾವನ್ನಪ್ಪಿದ್ದು ಈ ಸಾವುಗಳಿಗೆ ಚುನಾವಣಾ ಆಯೋಗ ಮತ್ತು ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಕಳೆದ 17 ವರ್ಷಗಳಿಂದ ಪರ್ಯಾಯ ರಾಜಕಾರಣವನ್ನು ಕಟ್ಟುತ್ತಿದ್ದು, ರಾಜ್ಯದಲ್ಲಿ 300ಕ್ಕೂ ಹೆಚ್ಚು ಜನಪ್ರತಿನಿಧಿಗಳು ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾಗಿದ್ದಾರೆ. 7 ಗ್ರಾಪಂಗಳಲ್ಲಿ ಪಕ್ಷ ಅಧಿಕಾರದಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಆಡಳಿತ ಪ್ರಶಸ್ತಿ ಲಭಿಸಿದೆ ಎಂದರು.

ಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಎನ್ನುವ ಕಾಂಗ್ರೆಸ್ ನಾಯಕರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹುರುಳಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಯಾರು ಎನ್ನುವುದನ್ನು ಮೊದಲು ನೋಡಿಕೊಳ್ಳಲಿ. ಈ ಕುರಿತು ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರೇ ಕೂಡಲೇ ಉತ್ತರಿಸಬೇಕು. ಕಾಂಗ್ರೆಸ್ ಹೇಗೆ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂಬುದನ್ನು ಎಸ್‌ಡಿಪಿಐ ದಾಖಲೆ ಸಮೇತ ಬಹಿರಂಗ ಚರ್ಚೆಯಲ್ಲಿ ಸಾಬೀತುಪಡಿಸಲು ಸಿದ್ಧವಿದ್ದೇವೆ. ಅವರು ಬರುತ್ತಾರಾ ಕೇಳಿ ಎಂದು ಸವಾಲು ಹಾಕಿದರು.


ಸುದ್ದಿಗೋಷ್ಟಿಯಲ್ಲಿ ಮುಸ್ತಾಕ್ ಹೊಸಮನಿ, ಇದಾಯತ್ ಉಲ್ಲಾ ಕಾಗದಗಾರ, ಅಪ್ಸರ್ ಕೆ.ಆರ್. ನಗರ, ಅಪ್ಸರ್ ಕೊಡ್ಲಿಪೇಟೆ, ಬಿಲಾಲ್ ಗೋಕಾವಿ, ಅಫಾನ್ ತರಫದಾರ್, ಅಬ್ದುಲ್ ಅಜೀಜ್, ಮಲ್ಲಿಕ್ ನಾಲಬಂದ್, ಮಹ್ಮದ್ ಶರೀಫ್ ಬಳ್ಳಾರಿ ಉಪಸ್ಥಿತರಿದ್ದರು.

ಜುಲೈ 13ರಂದು ಗದಗ ಕನಕ ಭವನದಲ್ಲಿ ಬೆಳಗ್ಗೆ 11.30ರಿಂದ ವಿಶೇಷ ಲೀಡರ್ಸ್ ಕಾನ್‌ಕ್ಲೇವ್ ಆಯೋಜಿಸಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ, ರಾಷ್ಟ್ರೀಯ ಕಾರ್ಯದರ್ಶಿ ಯಾ ಮೊಯ್ದೀನ್, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಉಪಸ್ಥಿತರಿರಲಿದ್ದಾರೆ ಎಂದು ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಫ್ಜರ್ ಕೊಡ್ಲಿಪೇಟೆ ಹೇಳಿದರು.