ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು: ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಚನ್ನಮ್ಮನ ಕಿತ್ತೂರಿನಲ್ಲಿ ಮತ್ತಿಬ್ಬರು ನಕಲಿ ವೈದ್ಯರನ್ನು ಪತ್ತೆ ಮಾಡಿದ್ದಾರೆ. ಅಲ್ಲದೇ, ದಾಳಿ ನಡೆಸಿ ಕ್ಲಿನಿಕ್‌ಗಳನ್ನು ಸೀಜ್ ಮಾಡಿದ್ದಾರೆ. ತಾಲೂಕಾ ವೈದ್ಯಾಧಿಕಾರಿ ಎಸ್.ಎಸ್.ಸಿದ್ದಣ್ಣವರ ನೇತೃತ್ವದಲ್ಲಿ 2 ಕ್ಲಿನಿಕ್‌ಗಳ ಮೇಲೆ ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಪಟ್ಟಣದ ಮಹೇಶ ಹಟ್ಟಿಹೊಳಿ ಎಂಬುವರಿಗೆ ಸೇರಿದ ಧನ್ವಂತರಿ ಕ್ಲಿನಿಕ್ ಹಾಗೂ ಇಬ್ರಾಹಿಂ ಜಮಾದಾರಗೆ ಸೇರಿರುವ ಜಮಾದಾರ ಕ್ಲಿನಿಕ್ ಮೇಲೆ ದಾಳಿ ನಡೆಸಿ ಸೀಜ್ ಮಾಡಿದ್ದಾರೆ.ಕೆಪಿಎಂಇ ಕಾಯ್ದೆಯಡಿ ಹಲವು ದಾಖಲಾತಿಗಳನ್ನು ಪರಿಶೀಲಿಸಿದಾಗ, ದಾಖಲಾತಿಗಳು ಇಲ್ಲದೇ ಕ್ಲಿನಿಕ್ ನಡೆಸುತ್ತಿದ್ದರೆಂಬ ಮಾಹಿತಿ ದೊರೆತಿದೆ. ಜಮಾದಾರ ಕ್ಲಿನಿಕ್ ಹೋಮಿಯೋಪಥಿಕ್ ಇದ್ದು ಇಲ್ಲಿ ಅಲೋಪಥಿಕ್ ಔಷಧಿಗಳು ದೊರೆತಿವೆ. ಅಲ್ಲದೆ, ಮಹೇಶ ಹಟ್ಟಿಹೊಳಿಯವರ ಧನ್ವಂತರಿ ಕ್ಲಿನಿಕ್ ಆಯುರ್ವೇದಿಕ್ ಕ್ಲಿನಿಕ್ ಇದ್ದು ಇಲ್ಲಿಯೂ ಸಹ ಅಲೋಪಥಿಕ್ ಔಷಧಿಗಳು ಸಿಕ್ಕಿವೆ. ಕಾಯ್ದೆಯಡಿ ಎಲ್ಲ ದಾಖಲಾತಿ ಹಾಗೂ ಅನುಮತಿ ಪಡೆಯುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಎಸ್.ಎಸ್.ಸಿದ್ದಣ್ಣವರ ತಿಳಿಸಿದ್ದಾರೆ.