ಕೋಲಾರದ ಡೂಮ್ ಲೈಟ್ ಸರ್ಕಲ್ನಲ್ಲಿ ಆಯೋಜಿಸಿದ್ದ ಬಿಜೆಪಿ ಜಾಗೃತ ಜಾಥಾ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಆರೋಪ
ಕನ್ನಡಪ್ರಭ ವಾರ್ತೆ ಕೋಲಾರದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಿರುವುದು ಕೇವಲ ರಾಜಕೀಯ ನಾಟಕವಾಗಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ಸಾರ್ವಜನಿಕರ ಶಾಂತಿಗೆ ಭಂಗವುಂಟು ಮಾಡುವ ಹೇಳಿಕೆಗಳನ್ನು ನೀಡುವ ಮೂಲಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕುತಂತ್ರ ನಡೆಸಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು
ಜಿಲ್ಲಾ ಬಿಜೆಪಿಯಿಂದ ನಗರದ ಡೂಮ್ ಲೈಟ್ ಸರ್ಕಲ್ನಲ್ಲಿ ಆಯೋಜಿಸಿದ್ದ ಬಿಜೆಪಿ ಜಾಗೃತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮುಂಬರಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಕೂಟವಾದ ಎನ್.ಡಿ.ಎ. ಆಡಳಿತ ಚುಕ್ಕಾಣಿ ಹಿಡಿಯುವುದು ಸೂರ್ಯ ಚಂದ್ರರವಷ್ಟೆ ಸತ್ಯವಾಗಿದೆ ಎಂದು ಭವಿಷ್ಯ ನುಡಿದರು.ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ವ್ಯಾಪಕವಾದ ಭ್ರಷ್ಟಚಾರ ತಂಡವಾಡುತ್ತಿದೆ. ಗ್ಯಾರೆಂಟಿ ನೆಪದಲ್ಲಿ ಅಭಿವೃದ್ಧಿ ಸ್ಥಗಿತ ಗೊಂಡಿದ್ದು. ದಿನ ನಿತ್ಯ ಬಳಕೆ ವಸ್ತುಗಳ ದರಗಳು ಗಗನಕ್ಕೆ ಏರಿದೆ. ಬಡ ಜನ ಸಾಮಾನ್ಯರ ಬದುಕು ದುಸ್ಸರ ಪರಿಸ್ಥಿತಿಗೆ ಸಿಲುಕಿದೆ. ಕಾಂಗ್ರೆಸ್ನ್ನು ಅಧಿಕಾರಕ್ಕೆ ತಂದ ಸಾಮಾನ್ಯ ಜನರು ಪಶ್ಚಾತಪ ಪಡುವಂತಾಗಿದೆ. ಮುಂಬರಲಿರುವ ಚುನಾವಣೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಎನ್.ಡಿ.ಎಗೆ ಬೆಂಬಲ ನೀಡಿ ಅಧಿಕಾರಕ್ಕೆ ತರುವಂತಾಗ ಬೇಕೆಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವ ಉಳಿಸಿ ಆರಾಜಕತೆ ಆಳಿಸಿ ಎಂಬ ಘೋಷಣೆಯೊಂದಿಗೆ ಕೋಲಾರದ ಮೂಲಕ ಜನಜಗೃತಿ ಜಾಥಾವನ್ನು ಪ್ರಾರಂಭಿಸಲಾಗಿದೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನು ಮೂರನೇ ಬಾರಿಗೆ ತರಲು ಜನರು ಆಶೀರ್ವಾಧಿಸ ಬೇಕೆಂದ ಅವರು ನರೇಂದ್ರ ಮೋದಿಯವರು ತಾವು ದೇಶದ ಪ್ರಧಾನಿಯಲ್ಲ ದೇಶದ ಪ್ರಧಾನ ಸೇವಕ ಎಂದು ಘೋಷಿಸುವ ಮೂಲಕ ಪಡೆದ ಜನಪ್ರಿಯತೆಯನ್ನು ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರಿಗೆ ಸಹಿಸಲು ಸಾಧ್ಯವಾಗದೆ ದೇಶದಲ್ಲಿ ಆರಾಜಕತೆ ಸೃಷಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ವಿಫಲ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ರಾಷ್ಟದಲ್ಲಿ ಬಿಜೆಪಿಯ ನರೇಂದ್ರ ಮೋದಿಯವರ ಜನಪರ ಆಡಳಿತವನ್ನು ಕಂಡು ಕಾಂಗ್ರೆಸ್ ಪಕ್ಷವು ಹತಾಶೆಗೊಂಡಿದೆ. ಬಿಜೆಪಿಗೆ ಜನಾದೇಶ ಸಿಕ್ಕಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಸಿಜೆಪಿ, ಸಿಪಿಐ ಪಕ್ಷಗಳೊಂದಿಗೆ ದೆಹಲಿಯ ಜಂತರ ಮಂತರ್ನಲ್ಲಿ ಎಸ್ಐಆರ್ ನೆಪದಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ಕಿಡಿಕಾರಿದರು.ಈ ಪ್ರತಿಭಟನೆಯಲ್ಲಿ ಶ್ರೀಲಂಕಾ, ಬಾಂಗ್ಲಾ ದೇಶ, ನೇಪಾಳದ ಮಾದರಿಯಲ್ಲಿ ಅರಾಜಕತೆ ಸೃಷ್ಟಿಸಲು ವಿಶೇಷ ತರಬೇತಿ ಪಡೆದ ಬುರುಡೆ ಗ್ಯಾಂಗ್ ಕರೆಸಲಾಗಿದೆ. ದೇಶದಲ್ಲಿ ನಡೆಸಲಾಗುತ್ತಿರುವ ಎಸ್ಐಆರ್ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸವಿಲ್ಲ. ಚುನಾವಣೆಯ ಇ.ವಿ.ಎಂ. ಬಗ್ಗೆ ವಿಶ್ವಾಸವಿಲ್ಲ , ಸುಪ್ರೀಂ ಕೋರ್ಟ್ ಬಗ್ಗೆಯೂ ವಿಶ್ವಾಸವಿಲ್ಲ. ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಕುತಂತ್ರಗಳಿಂದ ಜನರ ವಿಶ್ವಾಸವನ್ನು ನಂಬಿಕೆಯನ್ನು ಕಳೆದುಕೊಂಡಿದೆ. ರಾಷ್ಟ್ರದಲ್ಲಿ ಜನಪ್ರಿಯ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಇಳಿಸಲು ನಡೆಸುತ್ತಿರುವ ಷಡ್ಯಾಂತರ ವಿರುದ್ಧ ಬಿಜೆಪಿ ಜನಜಾಗೃತಿ ಮೂಡಿಸಬೇಕಾಗಿದೆ ಎಂದರು.
ಈಗಾಗಲೇ ರಾಜ್ಯದ ಎಲ್ಲಡೆ ಬಿಜೆಪಿ ಜನ ಜಾಗೃತಿ ಜಾಥ ಆಯೋಜಿಸಲಾಗಿದೆ. ನರೇಂದ್ರ ಮೋದಿಯವರ ಕೈ ಬಲಪಡೆಸಿ ಕಾಂಗ್ರೇಸ್ ಪಕ್ಷವನ್ನು ಬುಡ ಸಮೇತ ಕಿತ್ತೆಸೆಯಲು ಜನತೆ ಸಂಕಲ್ಪ ಮಾಡಬೇಕಾಗಿದೆ ಎಂದು ಕರೆ ನೀಡಿದರು.ಸಭೆಯಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಆಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ತ್ರಿವೇದಿ, ಮಾಜಿ ಉಪಮುಖ್ಯ ಮಂತ್ರಿ ಡಾ. ಅಶ್ವಥ್ ನಾರಾಯಾಣ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವರಾದ ವರ್ತೂರು ಪ್ರಕಾಶ್, ಗೋಪಾಲಯ್ಯ, ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಇದ್ದರು.