ಸಾರಾಂಶ
ನಮಗೆ ಯಾವಾಗ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯಲಸಾಧ್ಯ. ಆಗಾಗ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು.
ಯಲ್ಲಾಪುರ; ನಮಗೆ ಯಾವಾಗ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯಲಸಾಧ್ಯ. ಆಗಾಗ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಂದಿನ ಧಾವಂತದ ಬದುಕಿನಲ್ಲಿ ಆರೋಗ್ಯದ ಕಡೆ ಯಾರೂ ನಿಗಾ ಇಡದಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಆಚಾರ, ವಿಚಾರ, ಆಹಾರ ಇವೆಲ್ಲವೂ ಅಯೋಮಯಗೊಂಡಿವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದ ವಿಶ್ವದರ್ಶನ ಸಿ.ಬಿ.ಎಸ್.ಇ. ಆವಾರದಲ್ಲಿ ವಿಶ್ವದರ್ಶನ ಸೇವಾ ಮತ್ತು ಕೆ.ಎಸ್.ಹೆಗಡೆ ಆಸ್ಪತ್ರೆ ನಿಟ್ಟೆ ಮಂಗಳೂರು ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ನಾವು ಸ್ವಸ್ಥವಾಗಿದ್ದೇವೆಂದು ಅನಿಸಿದರೂ ನಮಗರಿವಿಲ್ಲದೇ ಕಾಯಿಲೆಗಳು ನಮ್ಮ ಶರೀರವನ್ನು ಆಕ್ರಮಿಸುತ್ತವೆ. ಆ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಿದ್ದೇವೆ. ನಾವು ಪ್ರತಿವರ್ಷವೂ ರಕ್ತದಾನ ಶಿಬಿರವನ್ನು ನಡೆಸುತ್ತಿದ್ದೇವೆ. ಕೆ.ಎಸ್.ಹೆಗಡೆ ಆಸ್ಪತ್ರೆಯ ಆಡಳಿತ ಮಂಡಳಿ ನಮ್ಮ ವಿನಂತಿಯನ್ನು ಒಪ್ಪಿ ಪ್ರತಿ ತಿಂಗಳೂ ಇಂತಹ ಆರೋಗ್ಯ ಶಿಬಿರವನ್ನು ಮಾಡಲು ಮುಂದಾಗಿದೆ ಎಂದರು.
ಕೆ.ಎಸ್.ಹೆಗಡೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಅಭಿಜಿತ್ ಶೆಟ್ಟಿ, ಕಿವಿ-ಮೂಗು-ಗಂಟಲು ತಜ್ಞ ಡಾ.ಶಶಾಂಕ ಕೋಟ್ಯಾನ್, ಎಲುಬು-ಕೀಲು ತಜ್ಞ ಡಾ.ಭಾರ್ಗವ್ ಎಸ್, ಮಕ್ಕಳ ತಜ್ಞೆ ಡಾ.ನಿಕಿತಾ ಪೂಜಾರಿ, ವೈದ್ಯಕೀಯ ತಜ್ಞ ಡಾ.ಎಡ್ವಿನ್ ಸ್ಯಾಮ್ ಉಪಸ್ಥಿತರಿದ್ದರು.ಶಿಬಿರದಲ್ಲಿ ಒಟ್ಟು ೧೦೮ ಜನರು ತಪಾಸಣೆ ಮಾಡಿಕೊಂಡರು.