ದೇಶದ ಕಾನೂನನ್ನು ಗೌರವಿಸಿ, ಪಾಲಿಸೋಣ

| Published : Apr 20 2025, 01:50 AM IST

ಸಾರಾಂಶ

ನಾವು ಪರರ ವಸ್ತುವಿನ ಬಗ್ಗೆ ಆಸೆ ಪಡಬಾರದು. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು.

ಯಲ್ಲಾಪುರ: ನಾವು ಪರರ ವಸ್ತುವಿನ ಬಗ್ಗೆ ಆಸೆ ಪಡಬಾರದು. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ದೇಶದ ಕಾನೂನನ್ನು ಗೌರವಿಸಿ, ಪಾಲಿಸಬೇಕು ಎಂದು ತಜ್ಞವೈದ್ಯೆ ಡಾ.ವೀಣಾ ಹೇಳಿದರು.ಅವರು ವಿಶ್ವದರ್ಶನ ಸಿಬಿಎಸ್ಇ ಆವಾರದಲ್ಲಿ ವಿಶ್ವದರ್ಶನ ಸೇವಾ, ಅ.ಭಾ.ಸಾ.ಪ ಕರ್ನಾಟಕ, ಗೋವರ್ಧನ ಗೋಶಾಲೆ ಕರಡೊಳ್ಳಿ ಸಂಯುಕ್ತವಾಗಿ ಹಮ್ಮಿಕೊಂಡ ೮ ದಿನಗಳ "ಭಾರತೀಯ ಜೀವನ ಶಿಕ್ಷಣ ಶಿಬಿರ "ದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಜೀವನದಲ್ಲಿ ಸದಾ ಉತ್ಸಾಹ, ಗುರು ಹಿರಿಯರ ಬಗ್ಗೆ ಸೌಜನ್ಯದ ನಡೆ-ನುಡಿ ಇಟ್ಟುಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಮಾತ್ರ ನಮ್ಮ ಬದುಕು ಹಸನಾದೀತು. ಅಂತೆಯೇ ಪೇಟೆಯಲ್ಲಿ, ಅಲ್ಲಿಲ್ಲಿ ದೊರಕುವ ವಿಷಯುಕ್ತ ಆಹಾರವನ್ನು ಎಂದೂ ಸೇವಿಸಲಾರದು ಎಂದರು.

ಉಳಿದೆಲ್ಲ ಪ್ರಾಣಿಗಳಿಗಿಂತಲೂ ಮನುಷ್ಯ ಭಿನ್ನ. ನಮ್ಮ ಆತ್ಮಶಕ್ತಿಗನುಗುಣವಾಗಿ ಸಮಾಧಾನದಿಂದ ಸದ್ವಿಷಯ, ಸದ್ವಸ್ತುಗಳು ಹಾಗೂ ಧರ್ಮದ ದಾರಿಯಿಂದ ಸಂಗ್ರಹಿಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಭಗವಂತನ ಚಿಂತನೆಯಲ್ಲಿಯೇ ನಮ್ಮ ಜೀವನವನ್ನು ಧರ್ಮ, ಅರ್ಥ, ಕಾಮ, ಮೋಕ್ಷಗಳೊಂದಿಗೆ ಆಚರಿಸಬೇಕು. ಇವುಗಳಿಗೆ ವಿಭಿನ್ನವಾದ ಲಕ್ಷಣಗಳು ಹೇಳಲ್ಪಟ್ಟಿವೆ. ಇದನ್ನು ನಮ್ಮ ಶಿಬಿರಾರ್ಥಿಗಳು ಪ್ರಾಜ್ಞರಿಂದ ಅರಿತು ಉತ್ತಮ ಜೀವನ ನಡೆಸಬೇಕು. ನಮ್ಮ ಸಂಪಾದನೆ ಧರ್ಮದ ದಾರಿಯಿಂದಲೇ ಸಾಗಬೇಕು. ಈ ಬದುಕು ಸುಲಭವಾಗಿ ದೊರೆತದ್ದಲ್ಲ. ಹಾಗಂತ ಪುರುಷ ಪ್ರಯತ್ನದಲ್ಲಿ ನಂಬಿಕೆ, ಶ್ರದ್ಧೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ಬದುಕಿನುದ್ದಕ್ಕೂ ಗುರುಹಿರಿಯರನ್ನು, ತಂದೆತಾಯಂದಿರನ್ನು ಗೌರವಿಸಬೇಕು. ಪ್ರೀತಿಸಬೇಕು. ಎಲ್ಲ ಜೀವಿಗಳನ್ನೂ ಮಾನವೀಯ ನೆಲೆಯಲ್ಲಿ ಕಾಣಬೇಕು. ಇದೆಲ್ಲದಕ್ಕೂ ಮಿಗಿಲಾಗಿ ಜೀವನದಲ್ಲಿ ಶಿಸ್ತು ಅತ್ಯಂತ ಮಹತ್ವದ್ದಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗಣ್ಯ ಉದ್ಯಮಿ ದಿಲೀಪ್ ಭಟ್ಟ ಮಾತನಾಡಿ, ನಾವು ಮಾಡುವ ಉತ್ತಮ ಕಾರ್ಯಗಳು ನಮ್ಮನ್ನು ದೈವತ್ವದೆಡೆಗೆ ಒಯ್ಯುವಂತೆ ನಾವು ನಡೆಯಬೇಕು. ಸಮಾಜಮುಖಿಯಾಗಿ ಬದುಕಬೇಕು. ಅದುವೇ ಶ್ರೇಷ್ಟ ಜೀವನವಾಗುತ್ತದೆ. ಆ ದೃಷ್ಟಿಯಿಂದ ವಿಶ್ವದರ್ಶನ ಸಂಸ್ಥೆಯಲ್ಲಿ ಆಯೋಜಿಸಿರುವ ಇಂತಹ ಶಿಬಿರ ವಿದ್ಯಾರ್ಥಿಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ನಡೆದಿರುವುದು ಸಂತಸ ತಂದಿದೆ ಎಂದರು.

ಶಿಬಿರದ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ ಉಪಸ್ಥಿತರಿದ್ದರು.

ಪಾಲಕರ ಪರವಾಗಿ ಸುಬ್ರಾಯ ಭಟ್ಟ ಉದ್ದಾಬೈಲ್, ಶಿಬಿರಾರ್ಥಿಗಳಾದ ಅಮಿತ್ ದೀಪಕ್ ಭಟ್ಟ, ಪವನ ಶೇಟ್, ಪ್ರಭಾ ಭಾಗ್ವತ್, ಭೂಮಿಕಾ ಪಟಗಾರ ಅನಿಸಿಕೆ ಹಂಚಿಕೊಂಡರು. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕ ಮಾತನಾಡಿದರು. ಶಿಬಿರದ ಪ್ರಮುಖರಾದ ವಿ.ನಾರಾಯಣ ಭಟ್ಟ ಮೊಟ್ಟೆಪಾಲ ಸ್ವಾಗತಿಸಿದರು. ಆಶಾ ಬಗನಗದ್ದೆ ಸಂಕಲ್ಪ ವಚನ ಬೋಧಿಸಿದರು. ರಾಮಕೃಷ್ಣ ಭಟ್ಟ ಕವಡಿಕೆರೆ ನಿರ್ವಹಿಸಿದರು. ಗೋಪಾಲಕೃಷ್ಣ ಗಾಂವ್ಕರ ವಂದಿಸಿದರು. ವೇದಾ ಕಿರುಕುಂಭತ್ತಿ ದೇಶಭಕ್ತಿಗೀತೆ ಮತ್ತು ಕೊನೆಯಲ್ಲಿ ವಂದೇ ಮಾತರಂ ಹಾಡಿದರು.

ವಿಶ್ವದರ್ಶನದಲ್ಲಿ ಜೀವನ ಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.