ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟನಲ್ಲಿ ಸರ್ಕಾರ ನೀಡುತ್ತಿರುವ ಕೋಟಿಗಟ್ಟಲೆ ಅನುದಾನ ಅನುಷ್ಠಾನ ಮಾಡಲಾಗದೆ ಅಸಹಾಯಕರಾಗಿ ಕೈ ಚಾಚಿ ಕುಳಿತಿದೆ ಈ ಪಟ್ಟಣ ಪಂಚಾಯತಿ. ಭಾರಿ ಸಿಬ್ಬಂದಿಗಳ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸ ಮಾಡಲಾಗದೆ ಔರಾದ್‌ ಪಟ್ಟಣ ಪಂಚಾಯತಿ ನರಳುತ್ತಿದೆ.

ಅನೀಲಕುಮಾರ್‌ ದೇಶಮುಖ್‌

ಕನ್ನಡಪ್ರಭ ವಾರ್ತೆ, ಔರಾದ್‌

ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟನಲ್ಲಿ ಸರ್ಕಾರ ನೀಡುತ್ತಿರುವ ಕೋಟಿಗಟ್ಟಲೆ ಅನುದಾನ ಅನುಷ್ಠಾನ ಮಾಡಲಾಗದೆ ಅಸಹಾಯಕರಾಗಿ ಕೈ ಚಾಚಿ ಕುಳಿತಿದೆ ಈ ಪಟ್ಟಣ ಪಂಚಾಯತಿ. ಭಾರಿ ಸಿಬ್ಬಂದಿಗಳ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸ ಮಾಡಲಾಗದೆ ಔರಾದ್‌ ಪಟ್ಟಣ ಪಂಚಾಯತಿ ನರಳುತ್ತಿದೆ.

ಪ‌ಪಂಗೆ ಮಂಜೂರಾದ ಒಟ್ಟು 58 ಜನ ಸಿಬ್ಬಂದಿಗಳ ಪೈಕಿ ಕೆವಲ 24 ಜನ ಸಿಬ್ಬಂದಿಗಳಿದ್ದು, 34 ಹುದ್ದೆಗಳು ಖಾಲಿ ಇವೆ. ಈ ಪೈಕಿ ಗರಿಷ್ಟ 11 ಜನ ಆಡಳಿತ ವಿಭಾಗದಲ್ಲಿ ಪ್ರಮುಖ ಕೆಲಸ ಮಾಡುವ ಕಂದಾಯ ಅಧಿಕಾರಿ, ಲೆಕ್ಕಾಧಿಕಾರಿ, ವಿಭಾಗ ಪ್ರಮುಖ, ಕಂಪ್ಯೂಟರ್‌ ಆಪರೇಟರ್‌, ಕರ ವಸೂಲಿಗಾರ, ಸ್ಯಾನಿಟರಿ ಮೃಲ್ವಿಚಾರಕ, ನೀರು ಸರಬ ರಾಜು ಮೇಲ್ವಿಚಾರಕ, ಡ್ರೈವರ್‌, ಸಮುದಾಯ ಸಂಯೋಜಕ, ಸಮುದಾಯ ಸಮನ್ವಯ ಅಧಿಕಾರಿ ಹಾಗೂ 9 ಜನ ಪೌರ ಕಾರ್ಮಿಕರ ಹುದ್ದೆಗಳು ಖಾಲಿಯಾಗಿದ್ದು, ಈ ಹುದ್ದೆ ಗಳಿಗೆ ಯಾರೊಬ್ಬರೂ ಇಲ್ಲದಿರುವುದು ಈಗ ಪಟ್ಟಣ ಪಂಚಾಯತ್‌ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಪಪಂ ಸಿಇಒ, ಸಹಾಯಕ ಎಂಜಿನಿಯರ್‌, ಸಹಾಯಕ ಆರೋಗ್ಯ ಇನ್ಸ್‌ಪೆಕ್ಟರ್‌, ಸಹಾಯಕ ನೀರು ಸರಬರಾಜು ಮೇಲ್ವಿಚಾರಕ, ಒಬ್ಬ ಸೇವಕನ ಮೇಲೆಯೇ ಇಡೀ ಪಂಚಾಯತಿಯ ಜವಾಬ್ದಾರಿ ಹೆಗಲೇರಿದ್ದು, ಗರಿಷ್ಟ 25 ಸಾವಿರ ಜನ ವಸತಿ ಇರುವ ಪಟ್ಟಣ ಪ್ರದೇಶದ ಸಮಗ್ರ ಸಾರ್ವಜನಿಕ ಸೌಲಭ್ಯಗಳ ಹೊಣೆಗಾರಿಕೆ ಹೊಂದಿದೆ.

ಕುಡಿಯುವ ನೀರಿನ ಸರಬರಾಜು, ನೈರ್ಮಲ್ಯ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ, ಚರಂಡಿ, ಸಾಮಾನ್ಯ ಕೆಲಸಗಳು ಕೂಡ ಆಗ್ತಿಲ್ಲ. ಮೂರ್ನಾಲ್ಕು ಜನರಿಂದ ಏನು ಮಾಡಲಿಕ್ಕೆ ಆಗೋಲ್ಲ. ಸ್ಥಳೀಯವಾಗಿ ಏನಾದ್ರು ಪರ್ಯಾಯ ವ್ಯವಸ್ಥೆ ಮಾಡಕೊಂಡು ಮಾಡಿದ್ರೂ ಅದಕ್ಕೆ ಅನುದಾನ ಬಳಕೆ ಮಾಡಲು ಸಾಧ್ಯವಾಗ್ತಿಲ್ಲ. ಕರ ವಸೂಲಿಗಾರ ಹುದ್ದೆ ಖಾಲಿ ಇರುವುದರಿಂದ ಪಂಚಾಯಿತಿಗೆ ಬರುವ ಆದಾಯ ಕೂಡ ನಿಂತು ಹೋಗಿರುವುದು ದುರ್ದೈವದ ಸಂಗತಿ.

ಅಕೌಂಟ್‌ ಆಫೀಸರ್‌ ಇಲ್ಲ:

ಪ್ರಮುಖವಾಗಿ ಸರ್ಕಾರ ಅನುದಾನ ನಿರ್ವಹಣೆಗೆ ಅಗತ್ಯವಿರುವ ಅಕೌಂಟ್‌ ಆಫೀಸರ್‌ ಹುದ್ದೆ ಕೂಡ ಒಂದು ವರ್ಷದಿಂದ ಖಾಲಿಯಾಗಿದೆ. ಹೀಗಾಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ನೀಡ್ತಿರುವ ಅನುದಾನ ಬಳಸಲು ಸಾಧ್ಯವಾಗ್ತಿಲ್ಲ. ಕೆಲವೊಂದು ಬಾರಿ ಚಿಟಗುಪ್ಪ, ಭಾಲ್ಕಿ ಪಪಂ ಅಕೌಂಟೆಂಟ್‌ಗಳನ್ನು ಕರೆ ತಂದು ಕೆಲಸ ಮಾಡಿಕೊಳ್ತಿದ್ದೇವೆ. ವರ್ಷ ಪೂರ್ತಿ ಯಾರು ಸಹಾಯ ಮಾಡ್ತಾರೆ. ನಮ್ಮ ಪಂಚಾಯತಿಗೆ ಪ್ರಮುಖವಾಗಿ ಅಕೌಂಟ್‌ ಆಫೀಸರ್‌ ಇಲ್ಲದಿರುವುದೇ ದೊಡ್ಡ ಕಂಟಕವಾಗಿ ಪರಿಣಮಿಸಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ನಿರ್ವಹಣೆ ವೆಚ್ಚಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗದೆ ಅಸಹಾಯಕರಾಗಿದ್ದೇವೆ ಎಂದು ಪಂಚಾಯತಿ ಸಿಬ್ಬಂದಿಯೊಬ್ಬರು ನೋವು ತೋಡಿಕೊಂಡಿದ್ದಾರೆ.

ಸಚಿವರ ತವರಿನಲ್ಲೆ ಸಿಬ್ಬಂದಿ ಗ್ರಹಣ:

ಪೌರಾಡಳಿತ ಸಚಿವ ರಹೀಮ್‌ಖಾನ್‌ ಅವರ ತವರು ಜಿಲ್ಲೆಯ ಔರಾದ್‌ ಪಪಂನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆಯಿಂದ ಸರ್ಕಾರದ ಯೋಜನೆ ಅನುಷ್ಠಾನ ಮಾಡಲಾಗದೆ ಅಧಿಕಾರಿಗಳು ಅಸಹಾಯಕರಾದ ಘಟನೆ ನಡೆಯುತ್ತಿದೆ. ಪಪಂ ನಲ್ಲಿ ಪ್ರಮುಖ ಹುದ್ದೆಗಳೆ ಖಾಲಿಯಾಗಿ ನಾಮ್‌ ಕೇ ವಾಸ್ತೆ ಇಲಾಖೆಯಂತೆ ಕೆಲಸ ಮಾಡಲಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗದೆ ಕೃತಕ ಸಮಸ್ಯೆಗಳ ಆಗರವಾಗಲು ಕಾರಣವಾದ ಸಿಬ್ಬಂದಿ ಕೊರತೆ ನೀಗಿಸಲಾಗದಷ್ಟು ಸಚಿವರು ಅಸಹಾಯಕರಾಗಿದ್ದಾರೆಯೇ ಎಂಬ ಚರ್ಚೆ ವ್ಯಾಪಕವಾಗಿದೆ.

-----

ಅಧಿಕಾರ ವಹಿಸಿಕೊಂಡ ಮೇಲೆ ಸಿಬ್ಬಂದಿ ಕೊರತೆ ಕಂಡು ಬಂದಿದೆ. ಪಟ್ಟಣದಲ್ಲಿ ಜನರ ಮೂಲ ಸಮಸ್ಯೆಗಳು ನಿವಾರಣೆ ಮಾಡಲು ಸಾಧ್ಯವಾಗ್ತಿಲ್ಲ. ಪ್ರಮುಖ ಹುದ್ದೆಗಳು ಖಾಲಿಯಾಗಿರುವುದಕ್ಕೆ ನಮಗೆ ಜನರ ಮುಂದೆ ಹೋಗಿ ಮಾತನಾಡಲೂ ಆಗ್ತಿಲ್ಲ. ಸರ್ಕಾರ ಇಲ್ಲಿನ ಪ್ರಮುಖ ಹುದ್ದೆಗಳು ಭರ್ತಿ ಮಾಡಿದ್ರೆ ಉತ್ತಮವಾದ ಸೇವೆ ಮಾಡಲು ಸಾಧ್ಯವಾಗಲಿದೆ.

- ಸರೂಬಾಯಿ ಘೂಳೆ, ಅಧ್ಯಕ್ಷರು ಪ.ಪಂ. ಔರಾದ್‌

---

ನಮ್ಮ ವಾರ್ಡ್‌ ಸಿಂಗಾಪೂರ್‌ ಮಾದರಿ ಮಾಡ್ತೀವಿ, ನಿಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತೀವಿ ಅಂತ ಭರವಸೆಯೊಂದಿಗೆ ಗೆದ್ದು ಸದಸ್ಯರಾಗಿದ್ದೇವೆ. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಸಿಬ್ಬಂದಿಗಳ ಕೊರತೆಯಿಂದಾಗಿ ನಮ್ಮ ವಾರ್ಡ್‌ನಲ್ಲಿ ಸಣ್ಣ ಕೆಲಸ ಮಾಡಲಿಕ್ಕೂ ಆಗುತ್ತಿಲ್ಲ. ನಾವು ಯಾವ ಮುಖ ಇಟ್ಟಕೊಂಡು ಜನರ ಮುಂದೆ ಹೋಗಬೇಕು.

- ಸಂತೋಷ ಪೋಕಲವಾರ್‌, ಸದಸ್ಯರು ಪ.ಪಂ, ಔರಾದ್‌