ಸಾರಾಂಶ
- ಎಲ್ಲ ಅಧಿಕಾರಿಗಳೂ ಶಿಸ್ತಿನಿಂದ ಪಾಲ್ಗೊಳ್ಳಬೇಕು: ತಹಸೀಲ್ದಾರ್ ಕವಿರಾಜ್
- - -ನ್ಯಾಮತಿ: ಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆ.15ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದು, ಎಲ್ಲರೂ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಪೊಲೀಸ್, ಹೋಂ ಗಾರ್ಡ್ ಮತ್ತು ವಿದ್ಯಾರ್ಥಿ ಪರೇಡ್ ನಡೆಯಲಿದ್ದು, ತೆರೆದ ಜೀಪ್ ವ್ಯವಸ್ಥೆ ಮಾಡಬೇಕು. ಇದು ತಾಲೂಕುಮಟ್ಟದ ಕಾರ್ಯಕ್ರಮ. ಎಲ್ಲ ಶಾಲಾ- ಕಾಲೇಜು ಹಾಗೂ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಬೆಳಗ್ಗೆ 8-30ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, 9 ಗಂಟೆಗೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ಹಾಜರಿರಬೇಕು ಎಂದು ಸೂಚಿಸಿದರು.ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳು ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ನಡೆಯಲಿವೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ನಮ್ಮೂರ ಸಂತೆಯಂತೆ ಆಗಬಾರದು. ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ಯಶಸ್ವಿಗಳಿಸಬೇಕು. ತಾಲೂಕುಮಟ್ಟದ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜು ಉಪಾಧ್ಯಾಯರು, ಉಪನ್ಯಾಸಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಈ ಸಮಯದಲ್ಲಿ ಅ.20ರಂದು ತಾಲೂಕು ಕಚೇರಿ ಆವರಣದಲ್ಲಿ ಶ್ರೀ ಡಿ.ದೇವರಾಜ್ ಅರಸು ಜನ್ಮದಿನ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಉಪ ತಹಸೀಲ್ದಾರ್ ಬಿ.ಗೋವಿಂದಪ್ಪ, ಶಿಕ್ಷಣ ಇಲಾಖೆಯ ಜಿ.ಎಂ.ಜಗದೀಶ್, ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಪ.ಪಂ. ಅಧಿಕಾರಿಗಳು, ಶಾಲಾ- ಕಾಲೇಜು ಉಪನ್ಯಾಸಕರು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಆರ್‌ಟಿಐ ಅಧ್ಯಕ್ಷ ಡಿ.ಎಂ. ವಿಜೇಂದ್ರ ಮಹೇಂದ್ರಕರ್, ಇದ್ದರು.
- - --ಚಿತ್ರ:
ನ್ಯಾಮತಿ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನ ಪೂರ್ವಭಾವಿ ಸಭೆ ನಡೆಯಿತು.