ಪರ್ಮಿಟ್ ರಹಿತ ಆಟೋ ಚಾಲನೆಗೆ ಅವಕಾಶ ಬೇಡ

| Published : Aug 06 2025, 01:15 AM IST

ಸಾರಾಂಶ

ದರ ಪರಿಷ್ಕರಣೆ ಸೇರಿದಂತೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಚಾಲನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲಾ ನಿರ್ಣಯಗಳನ್ನು ಜಾರಿಗೆ ತರಬೇಕು, ಹಾಗೂ ನಗರದಲ್ಲಿ ಪರ್ಮಿಟ್ ರಹಿತ ಆಟೋ ಚಾಲನೆಗೆ ಜಿಲ್ಲಾಡಳಿತ ಅವಕಾಶ ನೀಡಬಾರದು

ಕನ್ನಡಪ್ರಭ ವಾರ್ತೆ, ತುಮಕೂರು

ದರ ಪರಿಷ್ಕರಣೆ ಸೇರಿದಂತೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಚಾಲನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲಾ ನಿರ್ಣಯಗಳನ್ನು ಜಾರಿಗೆ ತರಬೇಕು, ಹಾಗೂ ನಗರದಲ್ಲಿ ಪರ್ಮಿಟ್ ರಹಿತ ಆಟೋ ಚಾಲನೆಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಕನ್ನಡ ಕಸ್ತೂರಿ ಆಟೋ ಚಾಲಕರ ವೇದಿಕೆಯ ರಾಜ್ಯಾಧ್ಯಕ್ಷ ರುದ್ರಾರಾಧ್ಯ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹಲವಾರು ಮನವಿಗಳ ನಂತರ 2018 ರಲ್ಲಿ ಆಟೋ ದರ ಪರಿಷ್ಕರಣೆ ಮಾಡಿ, ಕನಿಷ್ಠ 25 ರು ಹಾಗೂ ಅದರ ನಂತರದ ಒಂದು ಕಿ.ಮಿ. 12.50 ದರ ನಿಗದಿ ಮಾಡಿದ್ದರೂ ಇದುವರೆಗೂ ಜಾರಿಗೆ ಬಂದಿಲ್ಲ. ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿಲ್ಲ. ಕೂಡಲೇ ಪರಿಷ್ಕೃತ ದರ ಮತ್ತು ಆಟೋ ಮೀಟರ್ ಕಡ್ಡಾಯವಾಗಿ ಜಾರಿಗೆ ತರಬೇಕು. ಅಲ್ಲದೆ ಹೊಸದಾಗಿ ದರ ಪರಿಷ್ಕರಣೆಗೆ ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದರು.

2018 ರಲ್ಲಿ ದರ ಪರಿಷ್ಕರಣೆ ಮಾಡಿದ ಒಂದು ಕೆ.ಜಿ.ಗ್ಯಾಸ್ ಬೆಲೆ 42 ರು. ಇತ್ತು. ಇಂದು 60 ರು.ಗಳಿಗೆ ಹೆಚ್ಚಳವಾಗಿದೆ. ಹಳೆಯ ದರವೇ ಇನ್ನು ಜಾರಿಗೆ ಬಂದಿಲ್ಲ.ಈಗಾದರೆ ಆಟೋ ಚಾಲಕರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ತುಮಕೂರು ನಗರ ಸೇರಿದಂತೆ ಜಿಲ್ಲೆಯ 10 ತಾಲೂಕುಗಳಿಂದ ಸುಮಾರು 12 ಸಾವಿರ ಆಟೋಗಳಿವೆ. ಅವುಗಳಲ್ಲಿ ಸುಮಾರು 8 ಸಾವಿರ ಆಟೋಗಳು ತುಮಕೂರು ನಗರದಲ್ಲಿಯೇ ಸಂಚರಿಸುತ್ತಿವೆ. ಆದರೆ 3184 ಆಟೋಗಳಿಗೆ ಮಾತ್ರ ಟಿಟಿಪಿ ನಂಬರ್ ನೀಡಲಾಗಿದೆ. ನಗರದಲ್ಲಿ ಸಂಚರಿಸುವ ಶೇ40ರಷ್ಟು ಆಟೋಗಳಿಗೆ ಮಾತ್ರ ನಗರದಲ್ಲಿ ಕಾರ್ಯಾಚರಿಸಲು ಪರ್ಮಿಟ್ ಇದೆ. ಉಳಿದವು ಬೇರೆ ಬೇರೆ ತಾಲೂಕುಗಳಿಂದ ಬಂದು ನಗರದಲ್ಲಿ ಸಂಚರಿಸುತ್ತಿವೆ. ಇದರಿಂದ ತುಮಕೂರು ನಗರದಲ್ಲಿ ಪರ್ಮಿಟ್ ಪಡೆದ ಆಟೋಗಳಿಗೆ ಬಾಡಿಗೆ ಕಡಿಮೆಯಾಗಿದೆ ಎಂದರು.

ಸರಕಾರ 2017ರಲ್ಲಿ ತುಮಕೂರು ನಗರವನ್ನು ಸ್ಮಾರ್ಟ್ಸಿಟಿಯಾಗಿ ಘೋಷಿಸಿದೆ. ಇದಕ್ಕೂ ಮುನ್ನ ನಗರದಲ್ಲಿ ಸುಮಾರು 176ಆಟೋ ನಿಲ್ದಾಣಗಳಿದ್ದವು. ಆದರೆ ಇಂದು ಕೇವಲ 19 ಆಟೋ ನಿಲ್ದಾಣಗಳನ್ನು ಮಾತ್ರ ಗುರುತಿಸಲಾಗಿದೆ.ಜಿಲ್ಲಾಡಳಿತ, ನಗರಪಾಲಿಕೆ ಪ್ರತಿ ಬಸ್ ನಿಲ್ದಾಣದ ಪಕ್ಕದಲ್ಲಿ ಆಟೋ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು. ಬಸ್ ನಿಲ್ದಾಣಗಳಲ್ಲಿ ಇಳಿಯುವ ಜನರಿಗೆ ಕೂಗಳತೆಯ ದೂರದಲ್ಲಿ ಆಟೋ ಸೇವೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಹಲವಾರು ಬಾರಿ ಜಿಲ್ಲಾಡಳಿತ, ಸಾರಿಗೆ ಅಧಿಕಾರಿಗಳು,ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಗಮನಹರಿಸಬೇಕು ಸೂಕ್ತ ತರಬೇತಿ ಇಲ್ಲದ ಎಲ್ಲೋ ಬೋರ್ಡ್ ವಾಹನಗಳನ್ನು ಚಾಲಾಯಿಸಿ ಅಪಫಾತ ಮತ್ತೊಂದು ಸಂಭವಿಸಿದರೆ ಅನಾಹುತಗಳಿಗೆ ಹೊಣೆಯಾರು ಈ ರೀತಿ ಬ್ರೋಕರ್‌ಗಳಿಂದ ಬರುವ ಆಟೋಗಳಿಗೆ ನೊಂದಣಿ ಮಾಡಬಾರದು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ಆಗಸ್ಟ್ 7 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಹಿಂದಿನ ಸಭೆಯ ನಿರ್ಣಯಗಳನ್ನು ಮೊದಲು ಜಾರಿಗೆ ತರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕನ್ನಡ ಕಸ್ತೂರಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರವಿಕಿರಣ್, ಇಂತ್ತಿಯಾಜ್,ಶೌಕತ್ ಆಲಿ, ಇಲಿಯಾಜ್, ಯಲ್ಲಪ್ಪ, ಅಮಾನುಲ್ಲಾ, ರವಿಕುಮಾರ್ ಸೇರಿದಂತೆ ಹತ್ತಾರು ಆಟೋ ಚಾಲಕರು ಪಾಲ್ಗೊಂಡಿದ್ದರು.