ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಸಾಯನಿಕ ಮುಕ್ತ ಗಣಪತಿ ಕೂರಿಸಿ ಪರಿಸರ ಸಂರಕ್ಷಣೆ ಮಾಡುವಂತೆ ಪಟ್ಟಣದಲ್ಲಿ ಜಾಗೃತಿ ಮೂಡಿಸಲಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು, ರೋಟರಿ ಕ್ಲಬ್ ಹಾಗೂ ಅಚೀವರ್ಸ್ ಅಕಾಡೆಮಿಯಿಂದ ಕಾಲ್ನಡಿಗೆ ಜಾಥಾ ನಡೆಸಿ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಪರಿಸರ ಸ್ನೇಹಿ ಗಣಪತಿ ಕೂರಿಸಿ ಪರಿಸರ ಸಂರಕ್ಷಿಸಬೇಕು ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ನಂತರ ಮನೆ ಮನೆಗೆ ತೆರಳಿ ಪರಿಸರಸ್ನೇಹಿ ಗಣಪತಿ ಮೂರ್ತಿ ಹಾಗೂ ಗೌರಿ ಉಚಿತವಾಗಿ ವಿತರಣೆ ಮಾಡಿ ಪರಿಸರ ಸಂರಕ್ಷಿಸುವಂತ ಮನವಿ ಮಾಡಿದರು.ರೋಟರಿ ಸಂಸ್ಥೆ ಅಧ್ಯಕ್ಷ ಮಂಜುರಾಮ ಮಾತನಾಡಿ, ಗಣೇಶ ಹಬ್ಬದಲ್ಲಿ ಹಾನಿಕಾರಕ ಉತ್ಪನ್ನಗಳಿಂದ ತಯಾರಿಸಿದ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಬಳಸಬೇಕು ಎಂದು ಮನವಿ ಮಾಡಿದರು.
ಅಚೀವರ್ಸ್ ಅಕಾಡೆಮಿ ಅಧ್ಯಕ್ಷ ಡಾ.ರಾಘವೇಂದ್ರ ಮಾತನಾಡಿ, ವಿಷಪೂರಿತ ರಾಸಾಯನಿಕಗಳಿಂದ ತಯಾರಿಸಿದ ಮೂರ್ತಿಗಳಿಂದ ಜಲಮಾಲಿನ್ಯ ಹಾಗೂ ಜಲಚರಗಳ ಪ್ರಾಣಕ್ಕೆ ಕಂಟಕವಾಗುತ್ತದೆ. ಹೀಗಾಗಿ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿ ಪೂಜಿಸುವುದರಿಂದ ಪರಿಸರ ಸಂರಕ್ಷಿಸಬಹುದು ಎಂದರು.ಈ ವೇಳೆ ರೋಟರಿ ಕ್ಲಬ್ ನಿರ್ದೇಶಕರಾದ ರವಿ, ಕೃಷ್ಣ, ಅಚೀವರ್ಸ್ ಅಕಾಡೆಮಿ ನಿರ್ದೇಶಕರಾದ ದೇವರಾಜು, ಗುರುಪ್ರಸಾದ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.ಕಾವೇರಿ ಸಂಗಮದಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ನಿಷೇಧಾಜ್ಞೆ ಜಾರಿಶ್ರೀರಂಗಪಟ್ಟಣ:ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಾಂ ಕಾವೇರಿ ಸಂಗಮದಲ್ಲಿ ಗಣೇಶ ಮೂರ್ತಿ ವಿಸರ್ಜಿಸದಂತೆ ತಾಲೂಕು ದಂಡಾಧಿಕಾರಿ ಪರುಶುರಾಮ ಸತ್ತಿಗೇರಿ ಸಂಪೂರ್ಣ ನಿರ್ಬಂಧಿಸಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಪೊಲೀಸರ ವರದಿಯಂತೆ ಗಂಜಾಂನ ಸಂಗಮ ಸ್ಥಳವು ತುಂಬಾ ಅಪಾಯಕಾರಿ ಸ್ಥಳ. ಮೈಸೂರು ಹಾಗೂ ಸುತ್ತಮುತ್ತಲಿನಿಂದ ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಕಂಡು ಬಂದಿದೆ. ಅತಿಯಾದ ಸುಳಿಗಳು ಇರುವುದರಿಂದ ಗಣೇಶಮೂರ್ತಿ ವಿಸರ್ಜನೆಗೆ ಸುರಕ್ಷಿತ ಸ್ಥಳವಾಗಿರುವುದಿಲ್ಲ.ಈ ಹಿಂದೆ ಅನೇಕ ಸಾವು ನೋವುಗಳ ಪ್ರಕರಣಗಳು ದಾಖಲಾಗಿರುವುದರಿಂದ ಹಾಗೂ ದಡದಲ್ಲಿ ಪಾಚಿಕಟ್ಟಿರುವುದರಿಂದ ಸುರಕ್ಷಿತೆ ಇರುವುದಲ್ಲ. ಜೊತೆಗೆ ರಾತ್ರಿ ವೇಳೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರ ಪ್ರಾಣ ರಕ್ಷಣೆ ದೃಷ್ಟಿಯಿಂದ ಸೆ.7ರ ಬೆಳಗ್ಗೆ 6 ರಿಂದ ಸೆ.29ರ ಸಂಜೆ 6 ವರೆಗೆ ಸಂಪೂರ್ಣವಾಗಿ ನಿರ್ಭಂದಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.