ಸಾರಾಂಶ
ಜನರ ಆಸ್ತಿಗೆ ಇ-ಸ್ವತ್ತಿನ ಅವಶ್ಯಕತೆ ಇರುವ ಕಾರಣ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ
ಕನ್ನಡ ಪ್ರಭ ವಾರ್ತೆ, ಕಡೂರುಅನ್ಯಕ್ರಾಂತ ಆಗದ ಜಮೀನುಗಳಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಪುರಸಭೆ ವ್ಯಾಪ್ತಿಗೆ ಒಳಪಡಿಸಿ ಬಿ- ಖಾತಾ ಮಾಡಿ ಕೊಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು. ಗುರುವಾರ ಪುರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಜನರ ಆಸ್ತಿಗಳಿಗೆ ಈಗಾಗಲೇ ಖಾತೆ ಮಾಡಲಾಗಿದೆ. 2015ರಿಂದ ಈಚೆಗೆ ಅನ್ಯಕ್ರಾಂತವಾಗದ ಜಾಗಗಳಲ್ಲಿನ ಮನೆಗಳಿಗೆ ಯಾವುದೇ ದಾಖಲೆ ನೀಡದಂತೆ ಮತ್ತು ಬಿಲ್ಡಿಂಗ್ ಕಟ್ಟಲು ಅನುಮತಿ ನೀಡಬಾರದೆಂದು ಸರ್ಕಾರ ಆದೇಶ ಮಾಡಿತ್ತು. ಇದರಿಂದ ಜನರಿಗೆ ಬ್ಯಾಂಕ್ ಸಾಲ ಪಡೆ ಯಲು, ಮನೆ ಅಭಿವೃದ್ಧಿ ಮತ್ತು ಪರಭಾರೆ ಮಾಡಲು ತೊಡಕಾಗಿತ್ತು. ಅದನ್ನು ಸರಳಗೊಳಿಸಿ ಜನರ ಆಸ್ತಿಗಳ ವ್ಯವಹಾರಕ್ಕೆ ಇ-ಸ್ವತ್ತಿನ ಅವಶ್ಯಕತೆ ಇರುವ ಕಾರಣ ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಿ ಬಿ -ಖಾತಾ ಅಭಿಯಾನ ಮಾಡಬೇಕು ಎಂದು ಸೂಚಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಪೌರಾಡಳಿತ ಸಚಿವರು ನಮ್ಮ ಇಲಾಖೆ ನಿರ್ದೇಶಕರು, ಕಾರ್ಯದರ್ಶಿಗಳು ಸೇರಿ ನಿರ್ಣಯ ಮಾಡಿ ಮಾರ್ಗಸೂಚಿ ಮಾಡಿದೆ. ಯಾವುದಕ್ಕೆ ಖಾತೆ ಇದೆ- ಇಲ್ಲ ಎಂಬುದನ್ನು ತಿಳಿಯಬೇಕು. ಖಾತೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿದವರಿಂದ ಪ್ರಥಮ ಬಾರಿಗೆ ಎರಡು ಪಟ್ಟು ಕಂದಾಯ ಪಾವತಿ ಮಾಡಿಸಿಕೊಂಡು ಬಿ -ಖಾತಾ ಮಾಡಿಸಿ ಅವರಿಗೆ ಇ-ಖಾತೆ ಪಡೆಯಲು ಅವಕಾಶ ಮಾಡಿಕೊಡಿ ಎಂದು ಸರ್ಕಾರ ನಿರ್ದೇಶನ ನೀಡಿದೆ ಎಂದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನ್ಯ ಕ್ರಾಂತ ಆಗದಿರುವ ಬಡಾವಣೆಗಳಲ್ಲಿ ಕಂದಾಯ ಇಲಾಖೆ ಜಾಗಗಳಲ್ಲಿ ಆಸ್ತಿ ಇದ್ದಲ್ಲಿ ಅಂತವರು ನಿಗದಿಪಡಿಸಿದ ಕಂದಾಯ ಪಾವತಿಸಿದಲ್ಲಿ ಅವರಿಗೂ ಸರ್ಕಾರದ ಸವಲತ್ತುಗಳ ಜೊತೆ ಇ-ಸ್ವತ್ತು ನೀಡಬೇಕು ಎಂಬ ಆದೇಶವಿರುವ ಕಾರಣ ಅದಕ್ಕೆ ಚುರುಕು ನೀಡಲಾಗಿದೆ. ಈಗಾಗಲೇ ಪಟ್ಟಣದಲ್ಲಿ ಅಂತಹ ಆಸ್ತಿಗಳ ಕುರಿತು ಕಚೇರಿ ಸಿಬ್ಬಂದಿಯಿಂದ ಸರ್ವೆ ಮಾಡಿಸಿ ಸರ್ಕಾರದ ನಿರ್ಧಾರದಂತೆ ಅವರಿಗೆ ಬಿ-ಖಾತಾದಿಂದ ಇ-ಸ್ವತ್ತು ಮಾಡಿಕೊಡುವ ಉದ್ದೇಶ ಇದಾಗಿದೆ ಎಂದರು. ಇದಕ್ಕೆ ಮೇ 10, 2025 ಕಡೆಯ ದಿನಾಂಕವಾಗಿದ್ದು, ಅಂತಹ ಆಸ್ತಿ ದಾಖಲೆಗಳು 2024 ಆಗಸ್ಟ್ 10 ಒಳಗೆ ಇರಬೇಕು. ಸರ್ಕಾರದ ಆದೇಶದಂತೆ ಜನರು ತಮ್ಮ ಆಸ್ತಿಗಳಿಗೆ ಹೊಸ ದಾಖಲೆಗಳನ್ನು ಮಾಡಿಸಿ ಆಸ್ತಿಪಾಸ್ತಿ ರಕ್ಷಣೆಗೆ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಶ್ರೀನಿವಾಸ್ ತಿಳಿಸಿದರು.
ಮುಖ್ಯಾಧಿಕಾರಿ ಕೆ. ಎಸ್. ಮಂಜುನಾಥ್ ಜನರು ತಮ್ಮ ಆಸ್ತಿಗಳ ಮೂಲ ದಾಖಲೆಗಳನ್ನು ನೀಡಿ ಬಿ- ಖಾತಾಗೆ ಬರುವಂತೆ ದಾಖಲೆ ಪಡೆಯಬೇಕು ಎಂದು ಮನವಿ ಮಾಡಿದರು. ಇದರಿಂದ ಪುರಸಭೆಗೂ ಆದಾಯ ಬರಲಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಆಗಮಿಸಿ ಮಾಹಿತಿ ಪಡೆಯಬಹುದು ಎಂದು ಹೇಳಿ ಜನರು ಪುರಸಭೆಗೆ ಕಂದಾಯ ಮತ್ತು ನೀರಿನ ಕಂದಾಯ ಕಟ್ಟೋ ಮೂಲಕ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.20ಕೆೆಕೆಡಿಯು2, ಭಂಡಾರಿ ಶ್ರೀನಿವಾಸ್.