ಲೋಕ್‌ ಅದಾಲತ್‌ನಿಂದ ಶೀಘ್ರ ನ್ಯಾಯದಾನ ಸಾಧ್ಯ: ನ್ಯಾ.ಮಹಾವೀರ ಕರೆಣ್ಣವರ

| Published : Feb 21 2025, 11:46 PM IST

ಸಾರಾಂಶ

ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥ ಮಾಡಿಕೊಂಡರೆ ಸಮಾಜದಲ್ಲಿ ಶಾಂತಿ ಲಭಿಸುವುದು. ಇದರೊಂದಿಗೆ ಕುಟುಂಬಗಳಿಗೆ ವೈಯಕ್ತಿಕ ಲಾಭವೂ ಸಾಧ್ಯ. ಅಲ್ಲದೇ, ಶೀಘ್ರ ನ್ಯಾಯದಾನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಹಿರಿಯ ನ್ಯಾಯಾಧೀಶ ಮತ್ತು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಹೇಳಿದರು.

ಹೊನ್ನಾಳಿ ಕೋರ್ಟ್‌ನಲ್ಲಿ ಹೇಳಿಕೆ । ಕಾನೂನು ಸಮಿತಿಯಿಂದ ಮಾ.8ಕ್ಕೆ ಬೃಹತ್‌ ಅದಾಲತ್‌

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥ ಮಾಡಿಕೊಂಡರೆ ಸಮಾಜದಲ್ಲಿ ಶಾಂತಿ ಲಭಿಸುವುದು. ಇದರೊಂದಿಗೆ ಕುಟುಂಬಗಳಿಗೆ ವೈಯಕ್ತಿಕ ಲಾಭವೂ ಸಾಧ್ಯ. ಅಲ್ಲದೇ, ಶೀಘ್ರ ನ್ಯಾಯದಾನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಹಿರಿಯ ನ್ಯಾಯಾಧೀಶ ಮತ್ತು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾರ್ಚ್‌ 8ರಂದು ನಡೆಯುವ ಬೃಹತ್ ಲೋಕ ಅದಾಲತ್ ಸಂಬಂಧ ಹಮ್ಮಿಕೊಂಡಿದ್ದ ಲೋಕ ಅದಾಲತ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಗ್ರಾಮದ ಹಿರಿಯ ಮುಖಂಡರ ಸಮ್ಮಖ ಪಂಚಾಯಿತಿ ಕಟ್ಟೆಗಳಲ್ಲಿಯೇ ಬಹುತೇಕ ವ್ಯಾಜ್ಯಗಳು ಇತ್ಯರ್ಥವಾಗಿ ಹಳ್ಳಿಗಳಲ್ಲಿ ಆರೋಗ್ಯ ವಾತಾವರಣ ನಿರ್ಮಾಣವಾಗುತ್ತಿತ್ತು. ಕಾಲ ಬದಲಾದಂತೆ ಪಂಚಾಯಿತಿ ಕಟ್ಟೆಗಳ ಸಭೆಗಳು ಕಣ್ಮರೆಯಾಗಿವೆ. ಎಲ್ಲ ದೂರುಗಳು, ಪ್ರಕರಣಗಳು ನ್ಯಾಯಾಲಯಕ್ಕೇ ಬಂದು ಹೆಚ್ಚಿನ ಒತ್ತಡ ನಿರ್ಮಾಣವಾಗಿದೆ ಎಂದರು.

ಹೊನ್ನಾಳಿ ಮತ್ತು ಹರಿಹರ ನ್ಯಾಯಾಲಯಗಳಲ್ಲಿ ಸುಮಾರು 4 ಸಾವಿರ ಪ್ರಕರಣಗಳು ಬಾಕಿ ಇವೆ. ಕೇವಲ ಇಬ್ಬರು ನ್ಯಾಯಾಧೀಶರು ಕಾರ್ಯಭಾರ ನಿಭಾಯಿಸುವುದರಿಂದ ಸಹಜವಾಗಿ ಒತ್ತಡ ಹೆಚ್ಚಾಗಿ, ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬಗೊಂಡು ಪೆಂಡಿಂಗ್ ಆಗುವ ಸಂಭವವೇ ಹೆಚ್ಚಾಗಿದೆ. ಇದಕ್ಕಾಗಿ ರಾಜಿ ಸಂಧಾನ ಮಾಡಿಕೊಳ್ಳಬೇಕು. ಇದೊಂದೇ ಪರಿಹಾರವಾಗಿದೆ ಎಂದರು.

ಲೋಕ್‌ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಂಡರೆ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು. ಸರಳತೆ ಹಾಗೂ ಸೌಜನ್ಯದಿಂದ ವರ್ತಿಸಿ ಪ್ರಕರಣಗಳನ್ನು ಮುಗಿಸಿಕೊಳ್ಳುವ ಗುಣ ಬರಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಶಿವಪ್ಪಗಂಗಪ್ಪ ಸಲಗೆರೆ ಮಾತನಾಡಿ, ಲೋಕ್‌ ಅದಾಲತ್ ವೇದಿಕೆಗಳು ಶೀಘ್ರ ವಿಲೇವಾರಿ ಮಾಡುವಂತಹ ವೇದಿಕೆಗಳಾಗಿವೆ. ತಾತ್ಸಾರ ಮಾಡದೇ ಲೋಕ್‌ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳ ಮುಕ್ತಾಯಕ್ಕೆ ಪ್ರಕರಣದ ಎರಡೂ ಕಡೆ ಕಕ್ಷಿದಾರರು ಪ್ರಯತ್ನಿಸಬೇಕು ಎಂದು ಹೇಳಿದರು.

ಜಮೀನು, ನಿವೇಶನ, ಮನೆಗಳ ಗಡಿಗಳ ಗುರ್ತಿಸಿಕೊಳ್ಳುವ ಸಂದರ್ಭ ಅಣ್ಣ, ತಮ್ಮಂದಿರರಲ್ಲಿ ಹೊಂದಾಣಿಕೆ ಮುಖ್ಯ. ಅನವಶ್ಯಕವಾಗಿ ಕೋರ್ಟ್ ಕಟ್ಟೆ ಹತ್ತಿದರೆ ಮಾನಸಿಕ ಕಿರಿಕಿರಿ ಉಂಟಾಗಿ ಬಹುದೊಡ್ಡ ಅವಘಡಗಳು ಜರುಗುತ್ತವೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ಜಯಪ್ಪ ಮಾತನಾಡಿದರು. ಹೊನ್ನಾಳಿ, ಹರಿಹರ ಹಿರಿಯ ಶ್ರೇಣಿ ನ್ಯಾಯಾಧೀಶೆ ಪದ್ಮಶ್ರೀ ಎ.ಮನೋಳಿ, ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಎಚ್.ದೇವದಾಸ್, ಎಸ್.ಎನ್.ಪುಣ್ಯಕೋಟಿ, ಸರ್ಕಾರಿ ಸಹಾಯಕ ಭಿಯೋಜಕ ಭರತ್ ಭೀಮಯ್ಯ, ಹೆಚ್ಚು ನ್ಯಾಯಾಲಯದ ಸರ್ಕಾರಿ ಸಹಾಯಕ ಅಭಿಯೋಜಕಿ ಸ್ವಪ್ನ ವಕೀಲರ ಸಂಘದ ಕಾರ್ಯದರ್ಶಿ ಪುರುಷೋತ್ತಮ, ವಕೀಲರು, ಕಕ್ಷಿದಾರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಕೀಲ ಚಂದ್ರಪ್ಪ ಮಡಿವಾಳ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.