ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಆಗ್ರಹಿಸಿ ಬ್ಯಾಂಕ್ ನೌಕರರು ಮಂಗಳವಾರದಿಂದ ಮುಷ್ಕರ ಹೂಡಿದ್ದರಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಬ್ಯಾಂಕ್‌ ಸೇವೆಗಳು ಸ್ಥಗಿತಗೊಂಡಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಆಗ್ರಹಿಸಿ ಬ್ಯಾಂಕ್ ನೌಕರರು ಮಂಗಳವಾರದಿಂದ ಮುಷ್ಕರ ಹೂಡಿದ್ದರಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಬ್ಯಾಂಕ್‌ ಸೇವೆಗಳು ಸ್ಥಗಿತಗೊಂಡಿವೆ.

ದಿನದ ತಮ್ಮ ವಹಿವಾಟು, ಇತರೆ ಕೆಲಸಗಳಿಗೆ ಬ್ಯಾಂಕಿಗೆ ಆಗಮಿಸಿದ್ದ ಗ್ರಾಹಕರು ಸೇವೆಗಳು ದೊರಕದೆ ಪರದಾಡುತ್ತಿದ್ದಾರೆ. ಇದಲ್ಲದೆ ಇತ್ತ ಎಟಿಎಂನಲ್ಲಿಯೂ ಹಣವಿಲ್ಲ, ಹೀಗಾಗಿ ಅಗತ್ಯ, ತುರ್ತು ಕೆಲಸಗಳಿಗೆ ಹಣ ಬೇಕಾದವರು ಸಹ ಪರದಾಡುತ್ತಿದ್ದಾರೆ.

ಕಲಬುರಗಿಯಲ್ಲಿ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ನ ನೌಕರರು ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಒಕ್ಕೂಟದಡಿ ಬ್ಯಾಂಕ್ ಮುಷ್ಕರ ನಡೆಸಿದರು.

ಕಲಬುರಗಿಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಸೇರಿ ಭಾರಿ ಪ್ರತಿಭಟನೆ ನಡೆಸಿದ ನೌಕರರು 5 ದಿನಗಳ ಕೆಲಸಕ್ಕಾಗಿ ಆಗ್ರಹಿಸಿದರು. ಬರೀ ಭರವಸೆ ಸಾಲದು, ಆದೇಶ ಬೇಕೆಂದು ಆಗ್ರಹಿಸಿ ತಮ್ಮ ಬೇಡಿಕೆ ಮಂಡಿಸಿದರು. ಆರ್‌ಬಿಐ, ಎಲ್‌ಐಸಿ, ವಿವಿಧ ಬ್ಯಾಂಕಿಂಗ್ ಸೆಕ್ಟರ್‌ಗಳು ವಾರದಲ್ಲಿ ಐದು ದಿನಗಳ ಸೇವೆ ನಡೆಸುತ್ತಿವೆ. ನಾವು ಸಹ ವಿಪರೀತ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದರು.

ಐದು ದಿನಗಳ ಬ್ಯಾಂಕಿಂಗ್ ಸೌಲಭ್ಯ ಕುರಿತ ಬೇಡಿಕೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಅನೇಕ ಬಾರಿ ಮಾತುಕತೆ, ಸಭೆ ಹಾಗೂ ಸಂಧಾನ ಪ್ರಯತ್ನಗಳು ನಡೆದರೂ ಯಾವುದೇ ಫಲಕಾರಿ ನಿರ್ಣಯ ಹೊರಬಂದಿಲ್ಲ ಎಂದು ಬ್ಯಾಂಕ್‌ ನೌಕರರ ಯೂನಿಯನ್‌ ಮುಖಂಡರು ದೂರಿದರು.

ವಿಮೆ, ಆರ್‌ಬಿಐ ಸೇರಿದಂತೆ ಹಲವು ರಂಗಗಳಲ್ಲಿ ಈ 5 ದಿನಗಳ ಕೆಲಸದ ವ್ಯವಸ್ಥೆ ಜಾರಿಯಲ್ಲಿದೆ, ಆದರೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರ ಈ ಸೌಲಭ್ಯ ನೀಡದಿರುವುದು ಅನ್ಯಾಯವಾಗಿದೆ ಎಂದು ಬ್ಯಾಂಕ್‌ ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆ ಯೂಎಫ್‌ಬಿಯು ಒಕ್ಕೂಟದ ಅಡಿಯಲ್ಲಿ ಎಸ್‌ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಅಫ್ ಇಂಡಿಯಾ, ಯುನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಭಾಗವಹಿಸಿ ಮುಷ್ಕರ ಹಮ್ಮಿಕೊಂಡರು. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ನೌಕರರು ಸ್ಪಷ್ಟಪಡಿಸಿದರು.

ಗ್ರಾಹಕರ ಪರದಾಟ

ಬ್ಯಾಂಕ್‌ ನೌಕರರು 5 ದಿನಗಳ ಕೆಲಸದಬೇಡಿಕೆ ಈಡೇರಿಕೆಗೆ ಮುಷ್ಕರ ಹೂಡಿದ್ದರೆ ಇತ್ತ ಗ್ರಾಹಕರು ತಮ್ಮ ಕೆಲಸಗಳಿಗೆ ಬ್ಯಾಂಕ್‌ಗೆ ಬಂದು ಮುಷ್ಕರದಿಂದಾಗಿ ಕೆಲಸಗಳು ಆಗದೆ ಪರದಾಡಿದ್ದಾರೆ.

ಒಂದೆಡೆ ಬ್ಯಾಂಕ್ ನೌಕರರ ಮುಷ್ಜರ ಇನ್ನೊಂದೆಡೆ ಗ್ರಾಹಕರ ಪರದಾಟದಿಂದಾಗಿ ಬ್ಯಾಂಕ್‌ಗಳ ಮುಂದೆ ಮಂಗಳವಾರ ದಟ್ಟ ಜನ ಸಂದಣಿ ಕಂಡು ಬಂತು. ಕಳೆದ ಮೂರು ದಿನಗಳಿಂದ ಸರ್ಕಾರಿ ರಜೆ ಕಾರಣ ಬ್ಯಾಂಕ್ ವ್ಯವಹಾರ ಬಂದ್ ಆಗಿದ್ದವು. ರಜೆ ಮುಗಿಯುತ್ತಿದ್ದಂತೆಯೇ ಮುಷ್ಕರ ಶುರುವಾಗಿದ್ದರಿಂದ ಆತಂಕವಾಗಿದೆ ಎಂದು ಗ್ರಾಹಕರು ಪರದಾಡುತ್ತಿದ್ದಾರೆ.

ಮುಷ್ಕರದ ಕಾರಣದಿಂದಾಗಿ 3 ದಿನ ಸತತ ರಜೆ, ನಾಲ್ಕನೇ ದಿನವಾದ ಮಂಗಳವಾರ ಸಹ ಬ್ಯಾಂಕ್ ವ್ಯವಹಾರ ಇಲ್ಲದ ಕಾರಣ ಗ್ರಾಹಕರ ಪರದಾಟ ಮುಗಿಲು ಮುಟ್ಟಿತ್ತು. ಸರ್ಕಾರಿ ಕೆಲಸಕ್ಕೆ ರಜೆ ಹಾಕಿ ಮಗಳ ಭಾಗ್ಯ ಲಕ್ಷ್ಮೀ ಬಾಂಡ್‌ಗಾಗಿ ಬಂದ ಮಹಿಳೆ ನಿರಾಸೆಯಿಂದ ಬ್ಯಾಂಕ್‌ನಿಂದ ವಾಪಸ್ಸಾಗಿದ್ದು ಕಂಡು ಬಂದಿತು.