ಹುಬ್ಬಳ್ಳಿಯಲ್ಲೂ ರಾತ್ರಿ ಕೆನರಾ ಬ್ಯಾಂಕ್‌ ಬಾಗಿಲು ಹಾಗೂ ಕೀಲಿ ಮುರಿದು ದರೋಡೆಗೆ ವಿಫಲ ಯತ್ನ

| Published : Jan 21 2025, 01:32 AM IST / Updated: Jan 21 2025, 07:31 AM IST

ಸಾರಾಂಶ

ಬೀದರ್‌ನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್ ಹಣ ಲೂಟಿ ಹಾಗೂ ಮಂಗಳೂರಿನಲ್ಲಿ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಭಾನುವಾರ ರಾತ್ರಿ ಕೆನರಾ ಬ್ಯಾಂಕ್‌ ದರೋಡೆಗೆ ಯತ್ನ ನಡೆದಿದೆ.

 ಹುಬ್ಬಳ್ಳಿ : ಬೀದರ್‌ನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್ ಹಣ ಲೂಟಿ ಹಾಗೂ ಮಂಗಳೂರಿನಲ್ಲಿ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಭಾನುವಾರ ರಾತ್ರಿ ಕೆನರಾ ಬ್ಯಾಂಕ್‌ ದರೋಡೆಗೆ ಯತ್ನ ನಡೆದಿದೆ.

ನಗರದ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಗೆ ಭಾನುವಾರ ತಡರಾತ್ರಿ ನುಗ್ಗಿದ ತಂಡವೊಂದು ಬ್ಯಾಂಕಿನ ಬಾಗಿಲು ಹಾಗೂ ಕೀಲಿ ಮುರಿದು ದರೋಡೆಗೆ ಯತ್ನಿಸಿದೆ. ಸೋಮವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. 

ಸಂಪೂರ್ಣವಾಗಿ ಬಾಗಿಲು ತೆಗೆಯಲು ಕಳ್ಳರು ವಿಫಲರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಬ್ಯಾಂಕ್‌ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಘಟನೆ ನಡೆದರೂ ಪ್ರಕರಣ ದಾಖಲಿಸದಿರುವ ಬ್ಯಾಂಕ್‌ ಅಧಿಕಾರಿಯನ್ನು ತರಾಟೆಗೆ ಶಶಿಕುಮಾರ್‌ ಅವರು ತೆಗೆದುಕೊಂಡರು. ನಂತರ ಸೋಮವಾರ ಸಂಜೆ ಬ್ಯಾಂಕ್‌ ಅಧಿಕಾರಿಗಳು ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.