ಸಾರಾಂಶ
ಬೆಂಗಳೂರು : ನಗರದ ರಸ್ತೆಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸಿನಿಮೀಯ ಶೈಲಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ದಿನದ ಹಿಂದೆ ಅಶೋಕನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಈಜೀಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಕ್ಸ್ ಆ್ಯಪ್‌ನ ‘ಥರ್ಡ್ ಐ’ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ನಗರ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಸವಾರ ಪ್ರಾಣಾಪಾಯದಿಂದ ಪಾರು:
ದ್ವಿಚಕ್ರ ವಾಹನ ಸವಾರ ಕಾರೊಂದನ್ನು ಹಿಂದಿಕ್ಕಿ ಬಲಭಾಗಕ್ಕೆ ಬಂದಿದ್ದಾನೆ. ಇದೇ ಸಮಯಕ್ಕೆ ಕಾರಿನ ಬಲಭಾಗದಿಂದ ವೇಗವಾಗಿ ಬಂದ ಮತ್ತೊಂದು ದ್ವಿಚಕ್ರ ವಾಹನ ಬಂದಿದೆ. ಈ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಸವಾರ ಮೂರು ಪಲ್ಟಿ ಹೊಡೆದು ಎದ್ದು ನಿಂತಿದ್ದಾನೆ. ಹೆಲ್ಮೆಟ್ ಧರಿಸಿದ್ದ ಪರಿಣಾಮ ಸವಾರ ಬದುಕುಳಿದಿದ್ದಾನೆ.
ಮತ್ತೊಬ್ಬ ಬೈಕ್ ಸವಾರ ಪರಾರಿ:
ದ್ವಿಚಕ್ರ ವಾಹನ ರಸ್ತೆಯಲ್ಲಿ ಸುಮಾರು 10 ಮೀಟರ್‌ನಷ್ಟು ಮುಂದಕ್ಕೆ ಜಾರಿಗೊಂಡು ಹೋಗಿದೆ. ಈ ವೇಳೆ ಹಿಂದೆ ಬರುತ್ತಿದ್ದ ಕಾರಿನ ಚಾಲಕ ಸಮಯ ಪ್ರಜ್ಞೆ ಬಳಸಿ ತಕ್ಷಣ ಕಾರನ್ನು ನಿಲ್ಲಿಸಿದ್ದಾನೆ. ಒಂದು ವೇಳೆ ಕಾರು ಚಾಲಕ ವೇಗ ನಿಯಂತ್ರಿಸದೆ ಮುಂದಕ್ಕೆ ಹೋಗಿದ್ದರೆ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರನಿಗೆ ಕಾರು ಡಿಕ್ಕಿಯಾಗಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು. ಕಾರನ್ನು ಹಿಂದಿಕ್ಕಿ ಬಲಭಾಗಕ್ಕೆ ಬಂದ ದ್ವಿಚಕ್ರ ವಾಹನ ಸವಾರ ಮಾತ್ರ ಅಪಘಾತ ಸಂಭವಿಸಿದರೂ ದ್ವಿಚಕ್ರ ವಾಹನ ನಿಲ್ಲಿಸದೆ ಮುಂದೆ ಹೋಗಿದ್ದಾನೆ. ಈ ದ್ವಿಚಕ್ರ ವಾಹನ ಸವಾರನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.