ಸಾರಾಂಶ
ಕಳಪೆಯಾಗಿದ್ದರೆ ಗುತ್ತಿಗೆದಾರರನ್ನು ಜಿ.ಪಂ ಸಿಇಒ ಅವರು ಕಪ್ಪುಪಟ್ಟಿಗೆ ಸೇರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದರು.
ದಾವಣಗೆರೆ : ಜಲಜೀವನ್ ಮಿಷನ್ ಯೋಜನೆಯಡಿ ಮಾಯಕೊಂಡ ಕ್ಷೇತ್ರದ ಅಣಜಿ, ನೇರ್‍ಲಿಗೆ ಇತರೆಗೆ ಆದ ಕಳಪೆ ಕಾಮಗಾರಿ ಬಗ್ಗೆ ಡಿಸಿ, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಕಳಪೆಯಾಗಿದ್ದರೆ ಗುತ್ತಿಗೆದಾರರನ್ನು ಜಿ.ಪಂ ಸಿಇಒ ಅವರು ಕಪ್ಪುಪಟ್ಟಿಗೆ ಸೇರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ 2024-25ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಯಕೊಂಡ ಕ್ಷೇತ್ರದ ಅಣಜಿ, ನೇರ್‍ಲಿಗೆ ಇತರೆ ಕಡೆ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾದ ಬಗ್ಗೆ ಶಾಸಕ ಬಸವಂತಪ್ಪ ಹೇಳುತ್ತಿದ್ದಾರೆ. ಅಲ್ಲೆಲ್ಲಾ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಜಲಜೀವನ ಮಿಷನ್ ಕಾಮಗಾರಿಯಲ್ಲಿ ಕೆಲ ಕಡೆ ಕಾಮಗಾರಿ ಕಳಪೆಯಾಗಿದೆ. ಹೀಗಿದ್ದರೂ ಗ್ರಾಪಂ ಪಿಡಿಒಗಳು ನಿರಾಪೇಕ್ಷಣಾ ಪತ್ರ ನೀಡಿದ್ದಾರೆ. ಈ ಬಗ್ಗೆ ತನಿಖೆ ಆಗಲಿ. ನೇರ್‍ಲಿಗೆ, ಅಣಜಿ ಇತರೆಡೆ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿವೆ. ತಮ್ಮ ಗಮನಕ್ಕೂ ಇದು ಬಂದಿದೆ. ಆಯಾ ಗ್ರಾಮಸ್ಥರಿಂದಲೂ ಈ ಬಗ್ಗೆ ದೂರು ಬರುತ್ತಿವೆ. ಕೊಳವೆಬಾವಿ ಕೊರೆಸಲು ಹಣ ಇಲ್ಲವೆನ್ನಲಾಗುತ್ತಿದೆ. ಸಮಸ್ಯೆ ಬಂದಾಗ ಪರಿಹಾರಕ್ಕೆ ಹುಡುಕಾಟ ನಡೆಸದೇ ಮುಂಚೆಯೇ ಕ್ರಮ ಕೈಗೊಳ್ಳಿ ಎಂದರು.
ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಜಲಜೀವನ್ ಮಿಷನ್‌ನಡಿ 530 ಕಾಮಗಾರಿ ಪೂರ್ಣವಾಗಿದ್ದು, ಮಾಯಕೊಂಡದ 20 ಕಡೆ ಕಳಪೆ ಕಾಮಗಾರಿಯಾದ ಬಗ್ಗೆ ಗುರುತಿಸಲಾಗಿದೆ. ಸಚಿವರು, ಶಾಸಕರು ಹೇಳಿದ ಕಡೆಗೂ ಸ್ಥಳ ಪರಿಶೀಲಿಸಲಾಗುವುದು. ಕೆರೆಯಾಗಳಹಳ್ಳಿಯಲ್ಲಿ ನೀರಿನ ಸಮಸ್ಯೆ ಇದೆ. ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದಿದ್ದರೂ ಕೆಲವೊಂದಿಷ್ಟು ಸಮಸ್ಯೆ ಇದೆ. 15ನೇ ಹಣಕಾಸು ಯೋಜನೆಯಡಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ತಮ್ಮ ಕ್ಷೇತ್ರದ ಅನೇಕ ಕಡೆ ಕುಡಿಯುವ ನೀರಿನ ಘಟಕ ಹಾಳಾಗಿವೆ. ಗ್ರಾಪಂಗೆ ವಹಿಸುವ ಮುನ್ನ ಅವುಗಳನ್ನು ಸರಿಪಡಿಸಿಕೊಡಿ. 25 ಶುದ್ಧ ನೀರಿನ ಘಟಕ ಕೆಟ್ಟಿವೆ ಎಂದು ಸಚಿವರ ಗಮನಕ್ಕೆ ತಂದರು. ಅದಕ್ಕೆ ಸಚಿವ ಎಸ್‌ಎಸ್‌ಎಂ, ಘಟಕಗಳ ದುರಸ್ತಿಗೆ 15 ದಿನದಲ್ಲಿ ಪ್ರಸ್ತಾವನೆ ಸಲ್ಲಿಸಿ, ಎಲ್ಲವನ್ನೂ ದುರಸ್ತಿ ಮಾಡಿ, 1 ತಿಂಗಳಲ್ಲೇ ಗ್ರಾಪಂಗಳ ಸುಪರ್ದಿಗೆ ನೀಡುವಂತೆ ಸಿಇಒ ಅವರಿಗೆ ಸೂಚನೆ ನೀಡಿದರು.
ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ತಮ್ಮ ತಾಲೂಕಿನಲ್ಲೂ ಅಡಕೆ ಬೆಳೆಗೆ ಸಹಾಯಧನ ನೀಡಲು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಅರೆ ಮಲೆನಾಡು ವ್ಯಾಪ್ತಿಯ ಹೊನ್ನಾಳಿ, ಚನ್ನಗಿರಿ ಇತರೆ ತಾಲೂಕಿನ ಅಡಕೆ ಬೆಳೆಗೆ ಸಹಾಯಧನ ನೀಡುತ್ತಿದ್ದು, ಬಯಲು ಪ್ರದೇಶಗಳಾದ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಸಹಾಯಧನ ನೀಡುತ್ತಿಲ್ಲ. ಕೇಂದ್ರದಿಂದ ಸಹಾಯಧನ ಕೊಡಿಸಿ ಎಂದರು. ಅದಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದರೆ ಎಲ್ಲರೂ ಸೇರಿ, ಕೇಂದ್ರದಿಂದ ಸಹಾಯಧನ ಕೋರುವ ಕೆಲಸ ಮಾಡೋಣ ಎಂದರು.
ಶಾಸಕ ಬಸವಂತಪ್ಪ ಮಾತನಾಡಿ, ಮಾಯಕೊಂಡ, ಹೊನ್ನಾಳಿ ಕ್ಷೇತ್ರಗಳ ಶಾಲಾ ಕೊಠಡಿಗಳು ಹಾಳಾಗಿವೆ. ವಿಶೇಷವಾಗಿ ಉರ್ದು ಶಾಲೆಗಳ ಪರಿಸ್ಥಿತಿ ಗಂಭೀರವಾಗಿದೆ. ತೋಳಹುಣಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ವೈದ್ಯರನ್ನು ಹೂವಿನಮಡು ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಮತ್ತೊಬ್ಬ ವೈದ್ಯರ ಬಗ್ಗೆ ಮದ್ಯ ಸೇವನೆ ಮಾಡುವುದು ಸೇರಿದಂತೆ ಇತರೆ ಆರೋಪಗಳಿವೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆ ಮಾಡಿ, ಒಂದುವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಅಮಾನತು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ, ಮೇಯರ್ ಕೆ.ಚಮನ್ ಸಾಬ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೇರಿದಂತೆ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.