ಸಾರಾಂಶ
ಬಂಟ್ವಾಳ ತಾಲೂಕಿನ ಕುಡ್ತಮುಗೇರು ಹಾಗೂ ಗಡಿಪ್ರದೇಶ ಕನ್ಯಾನ ಪಾದೆಕಲ್ಲು ಎಂಬಲ್ಲಿಗೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಂದಾಯ ಅಧಿಕಾರಿಗಳ ತಂಡ ಹಠಾತ್ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳೀಯ ಗ್ರಾ.ಪಂ.ಪಿಡಿಒ ಅವರಿಗೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಹಸ್ತಾಂತರ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಬಾಕ್ಸೈಟ್ ಅಗೆಯುವ ಸ್ಥಳಕ್ಕೆ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.ಬಂಟ್ವಾಳ ತಾಲೂಕಿನ ಕುಡ್ತಮುಗೇರು ಹಾಗೂ ಗಡಿಪ್ರದೇಶ ಕನ್ಯಾನ ಪಾದೆಕಲ್ಲು ಎಂಬಲ್ಲಿಗೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಂದಾಯ ಅಧಿಕಾರಿಗಳ ತಂಡ ಹಠಾತ್ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳೀಯ ಗ್ರಾ.ಪಂ.ಪಿಡಿಒ ಅವರಿಗೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಹಸ್ತಾಂತರ ಮಾಡಲಾಗಿದೆ.
ಕುಡ್ತಮುಗೇರು ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಸುಮಾರು 30 ಕ್ಕೂ ಅಧಿಕ ಪಿಕಪ್ ಲೋಡ್ ಮರಳು ರಾಶಿ ಸ್ಥಳದಲ್ಲಿ ಸಂಗ್ರಹಿಸಲಾಗಿತ್ತು.ಮಾನನಳರ್ಕಿ ಉಪಯೋಗಿಸಿ ಮರಳು ತೆಗೆಯಲು ಉಪಯೋಗಿಸುವ ಲಕ್ಷಾಂತರ ರು. ಮೌಲ್ಯದ ಸೊತ್ತುಗಳು ಅಧಿಕಾರಿಗಳಿಗೆ ದೊರೆತಿದ್ದು, ಈ ಪ್ರಕರಣದ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಕೊಳ್ನಾಡು ಗ್ರಾಮಪಂಚಾಯತ್ ಪಿಡಿಒ ಅವರಿಗೆ ತಹಸೀಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ.
ಗಡಿಭಾಗವಾದ ಕನ್ಯಾನದ ಪಾದೆಕಲ್ಲು ಎಂಬಲ್ಲಿ ಬೃಹತ್ ಮಟ್ಟದಲ್ಲಿ ಬಾಕ್ಸೈಟ್ ಅಗೆಯುತ್ತಿದ್ದು, ಅಕ್ರಮವಾಗಿ ಸಾಗಿಸಲಾಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟಕದ ದಾಖಲೆ ಪತ್ರಗಳನ್ನು ಕಂದಾಯ ಇಲಾಖೆಗೆ ನೀಡುವಂತೆ ತಹಸೀಲ್ದಾರ್ ಮಾಲೀಕರಿಗೆ ತಿಳಿಸಿದ್ದು, ಈ ಪ್ರಕರಣವನ್ನು ಗಣಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ದಾಳಿಯಲ್ಲಿ ವಿಟ್ಲ ಕಂದಾಯ ಅಧಿಕಾರಿ ರವಿ ಎಂ.ಎನ್, ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ನಾಯಕ್, ಗ್ರಾಮ ಸಹಾಯಕಾದ ಗಿರೀಶ್ ಶೆಟ್ಟಿ, ರುಕ್ಮಯ್ಯ ಮೂಲ್ಯ, ಲಿಂಗಪ್ಪ ಗೌಡ ಭಾಗವಹಿಸಿದ್ದರು.