ನರಗುಂದ: ಏ. 20ಅನ್ನು ಬಸವ ದಿನ ಎಂದು ಘೋಷಿಸಿ ಬಸವ ಜಯಂತಿ ಆಚರಣೆ ಮಾಡುವಂತೆ ಅಮೆರಿಕದ ಪ್ಲಾನೋ ನಗರದ ಮೇಯರ್ ಘೋಷಿಸಿದ್ದಾರೆ.

ಅನಿವಾಸಿ ಭಾರತೀಯ ಸಾಫ್ಟವೇರ್ ಉದ್ಯಮಿ ಶರಣ ಚಂದ್ರಕಾಂತ ಕಡಿ ಅವರು ಅಮೆರಿಕದ ಪ್ಲಾನೋ ನಗರದ ಟೆಕ್ಸಾಸದ ಮೇಯರ್ ಜಾನ್‌ ಬಿ. ಮುನ್ಸವರ ಅವರಿಗೆ ಏ. ೨೦ಅನ್ನು ಬಸವ ದಿನ ಎಂದು ಘೋಷಣೆ ಮಾಡಬೇಕೆಂದು ಇತ್ತೀಚೆಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಟೆಕ್ಸಾಸ್‌ನ ಮೇಯರ್ ಅವರು ಬಸವ ಜಯಂತಿ ಆಚರಣೆ ಮಾಡಲು ಆದೇಶ ಪತ್ರವನ್ನು ಸೋಮವಾರ ಚಂದ್ರಕಾಂತ ಕಡಿ ಅವರಿಗೆ ನೀಡಿದರು.

ಶರಣ ಚಂದ್ರಕಾಂತ ಕಡಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಸದ್ಯ ಸಾಫ್ಟವೇರ್ ಉದ್ಯಮಿಯಾಗಿ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ವಚನ ಸಾಹಿತ್ಯ ಕೊಡುಗೆ ನೀಡಿದ ಬಸವೇಶ

ನರಗುಂದ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರು ಅನುಭವ ಮಂಟಪ ನಿರ್ಮಿಸಿ ಹಲವಾರು ಶರಣರಿಂದ ಜಗತ್ತಿಗೆ ವಚನ ಸಾಹಿತ್ಯ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ ತಿಳಿಸಿದರು.ಸೋಮವರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಸವ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಜಗತ್ತಿಗೆ ವಚನ ಸಾಹಿತ್ಯವನ್ನು ಕೊಟ್ಟವರು ಎಂದರೆ ಬಸವಣ್ಣನವರು. ಎಲ್ಲರೂ ನಮ್ಮವರೇ ಎಂದು ಜಗತ್ತಿಗೆ ಸಾರಿದರು ಎಂದರು.ಶರಣ ವಿ.ಎನ್. ಕೊಳ್ಳಿ ಮಾತನಾಡಿ, ಸಮಾಜದಲ್ಲಿ ಮೊದಲು ಸಮಾನತೆ ಸಾರಿದವರು ಬಸವಣ್ಣರು. ಮೇಲಾಗಿ 12ನೇ ಶತಮಾನದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದಾರೆಂದು ತಿಳಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಸಂಚಾಲಕಿ ಪ್ರಭಕ್ಕ ಮಾತನಾಡಿ, ಬಸವಣ್ಣನವರು ಜಗತ್ತಿಗೆ ಅಣ್ಣ ಎನಿಸಿಕೊಂಡವರು. ತಮ್ಮ ವಚನ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಬಸವಣ್ಣನ ಕಾಲದಲ್ಲಿ ಯಾವುದೇ ಜಾತಿ, ಧರ್ಮ,ಲಿಂಗ, ಭೇದ ಇರಲಿಲ್ಲ. ಎಲ್ಲರೂ ಒಂದೇ ಎಂಬಂತೆ ಬದುಕಲು ದಾರಿ ತೋರಿಸಿದವರು ಬಸವಣ್ಣನವರು ಎಂದರು.

ಕೂಡಲ ಸಂಗಮದೇವ ಎಂಬ ಅಂಕಿತನಾಮವನ್ನು ಇಟ್ಟುಕೊಂಡು ಪರಮಾತ್ಮ ಶಿವನನ್ನು ಪೂಜಿಸಿದರು. ಪರಮಾತ್ಮ ಒಬ್ಬನೇ ಶಿವ ಎಂಬುದನ್ನು ವಚನ ಸಾಹಿತ್ಯದ ಮೂಲಕ ತಿಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ. ವೀರನಗೌಡ್ರ, ಬಸಶೆಟ್ಟೆಪ್ಪ ನಾಶಿ, ಅಡಿವೆಪ್ಪ ಬಾಳಿಕಾಯಿ, ಅರುಣಾ ವಾಳದ, ಡಾ. ಸುಮಂಗಲಾ ಸವದತ್ತಿ, ಬಸಮ್ಮ ಜಾವೂರ, ರತ್ನ ವಾಳದ, ಸುಮಂಗಲಾ ವಾಳದ, ನಂದಾ ಕೋರಿ, ವಿಶಾಲಾ ವಾಳದ, ಸುಧಾ ಮುಧೋಳೆ, ಸುಮಿತ್ರ ಬಸಶೆಟ್ಟಿ, ಸೇರಿದಂತೆ ಮುಂತಾದವರು ಇದ್ದರು.