ಹಾವೇರಿ: ಇಡೀ ನಾಡು ಜಗಜ್ಯೋತಿ ಬಸವೇಶ್ವರರ ಜಯಂತಿಯ ಸಂಭ್ರಮದಲ್ಲಿರುವಾಗಲೇ, ಹಾವೇರಿ ನಗರದಲ್ಲಿ ದುಷ್ಕರ್ಮಿಗಳು ಅಕ್ಷಮ್ಯ ಅಪರಾಧವೆಸಗಿದ್ದಾರೆ. ನಗರದ ಹೃದಯ ಭಾಗ ಗಾಂಧಿ ಸರ್ಕಲ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.
ಬಸವ ಜಯಂತಿಯ ಪವಿತ್ರ ದಿನದಂದೇ ಈ ಕೃತ್ಯ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ಬೆಳ್ಳಂಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿ ಯಾರೂ ಇಲ್ಲದ ವೇಳೆ ಸ್ಥಳಕ್ಕೆ ಆಗಮಿಸಿದ ಅಪರಿಚಿತ ದುಷ್ಕರ್ಮಿಗಳು, ಉದ್ದೇಶಪೂರ್ವಕವಾಗಿಯೇ ಪುತ್ಥಳಿಯನ್ನು ನೆಲಕ್ಕುರುಳಿಸಿ ಹಾನಿಗೊಳಿಸಿದ್ದಾರೆ ಎಂದು ಶಂಕಿಸಲಾಗಿದೆ.ಸ್ಲ್ಬಾಬಿನ ಮೇಲಿದ್ದ ಪುತ್ಥಳಿಯ ಮೇಲೆ ಹರಿತವಾದ ಸಾಧನದಿಂದ ದಾಳಿ ಮಾಡಿದ್ದು, ಪುತ್ಥಳಿ ಚೂರು ಚೂರಾಗಿ ಕೆಳಕ್ಕೆ ಬಿದ್ದಿದೆ.ಘಟನೆ ತಿಳಿಯುತ್ತಿದ್ದಂತೆಯೇ ಹಾವೇರಿ ಶಹರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಮಹತ್ವದ ಸುಳಿವುಗಳನ್ನು ಕಲೆಹಾಕುತ್ತಿರುವ ಪೊಲೀಸರು, ತಪ್ಪಿತಸ್ಥರಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಯುವಕನ ವಶಕ್ಕೆ ಪಡೆದು ವಿಚಾರಣೆ: ಹಾವೇರಿ ನಗರದಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಭವ ವಿನೋದ ರಾಯ್ಕರ್ (28) ಎಂಬಾತನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ವಿಚಾರಣೆ ವೇಳೆ ಆರೋಪಿತ ವೈಭವ ರಾಯ್ಕರ ಮಾನಸಿಕ ಅಸ್ವಸ್ಥ ಇರುವುದು ಬೆಳಕಿಗೆ ಬಂದಿದ್ದು, ಸಿಮೆಂಟ್ ಇಟ್ಟಿಗೆಯಿಂದ ಗಾಂಧೀಜಿಯವರ ಮೂರ್ತಿ ಭಗ್ನಗೊಳಿಸಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಸಿದಂತೆ ಈಗಾಗಲೇ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದ್ದು, ತನಿಖಾ ಪ್ರಕ್ರಿಯೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.ನಗರದ ಮಹತ್ಮಾ ಗಾಂಧಿ ವೃತ್ತದಲ್ಲಿದ್ದ ಗಾಂಧೀಜಿಯವರ ಪುತ್ಥಳಿಯನ್ನು ಯಾರೋ ಕಿಡಗೇಡಿಗಳು ಧ್ವಂಸ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಹಾವೇರಿ ನಗರಸಭೆ ಪೌರಾಯುಕ್ತ ಕಾಂತರಾಜು ಎಚ್. ಹೇಳಿದರು.