ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಬಸವ ಜಯಂತಿ ಉತ್ಸವ ಸಮಿತಿ ಸೇರಿದಂತೆ ವಿವಿಧ ಲಿಂಗಾಯತ ಸಂಘಟನೆಗಳ ಆಶ್ರಯದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಅದ್ಧೂರಿ ಮೆರವಣಿಗೆಯು ಬೆಳಗಾವಿ ನಗರದಲ್ಲಿ ಶುಕ್ರವಾರ ನಡೆಯಿತು.
ನಗರದ ಕಿತ್ತೂರು ರಾಣಿ ಚನ್ನಮ್ಮವೃತ್ತದಲ್ಲಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮತ್ತು ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.ಚನ್ನಮ್ಮವೃತ್ತದಿಂದ ಆರಂಭಗೊಂಡ ಮೆರವಣಿಗೆಯ ಕಾಕತಿವೇಸ್, ಶನಿವಾರಕೂಟ, ಗಣಪತಿಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ಬೋಗಾರವೇಸ್ ವೃತ್ತದ ಮೂಲಕ ಹಾಯ್ದು ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು ಮೈದಾನಕ್ಕೆ ತೆರಳಿ ವಿಸರ್ಜನೆಗೊಂಡಿತು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಗುರುದೇವ್ ಪಾಟೀಲ್ ಹಾಗೂ ಅಪಾರ ಬಸವ ಭಕ್ತರು ಪಾಲ್ಗೊಂಡಿದ್ದರು.ಮೆರವಣಿಗೆ ಉದ್ದಕ್ಕೂ ಬಸವಣ್ಣವರ ವಚನಗಳನ್ನು ಸಂದೇಶಗಳನ್ನು ಭಕ್ತರು ಘೋಷ್ಯ ವಾಕ್ಯದ ಮೂಲಕ ತಿಳಿಸಿದರು. ಜೈ ಬಸವೇಶ... ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಎತ್ತುಗಳ ಮೆರವಣಿಗೆ ಗಮನ ಸೆಳೆಯಿತು.
ನಗರದ ವಿವಿಧೆಡೆ ಬಸವಶ್ವರರ ಭಾವಚಿತ್ರ, ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಯಿತು. ಬಸವಣ್ಣನ ಮಂದಿರಗಳಿಗೆ ತೆರಳಿ, ಬಸವ ಭಕ್ತರು ಪೂಜೆ ಸಲ್ಲಿಸಿದರು. ಬೆಳಗಾವಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಬಸವೇಶ್ವರ ವೃತ್ತದಲ್ಲಿ ಆಚರಿಸಲಾಯಿತು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಬಸವಣ್ಣವರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಮಹಾನಗರ ಪಾಲಿಕೆ ಆಯುಕ್ತ ಬಿ ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಸಮಾಜದ ಮುಖಂಡರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.