ಕನ್ನಡಪ್ರಭ ವಾರ್ತೆ ದಾವಣಗೆರೆ
ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಒಳಮೀಸಲಾತಿ ಗೊಂದಲದ ಮಧ್ಯೆಯೂ ಹಳೇ ಮೀಸಲಾತಿಯಲ್ಲೇ ರಾಜ್ಯದಲ್ಲಿ 56432 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಜಿಲ್ಲಾ ಛಲವಾದಿ ಮಹಾಸಭಾ ಸ್ವಾಗತಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ, ನಿವೃತ್ತ ಎಸ್ಪಿ ಎನ್.ರುದ್ರಮುನಿ, ಹಳೆ ಮೀಸಲಾತಿಯಡಿ ನೇಮಕಾತಿ ಪ್ರಕ್ರಿಯೆಗೆ ಸರ್ಕಾರವು ಮುಂದಾಗಿರುವುದು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಆಶಾದಾಯಕ ಬೆಳವಣಿಗೆ ಎಂದರು.
ಒಳಮೀಸಲಾತಿ ವಿಚಾರಕ್ಕೆ ಅಲೆಮಾರಿ ಜನಾಂಗದವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದ್ದವು. ಇದರಿಂದ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಮೀರುತ್ತಿದ್ದುದಲ್ಲದೇ, ನಿರುದ್ಯೋಗದ ಸಮಸ್ಯೆಯೂ ಉಲ್ಬಣಿಸುತ್ತಲೇ ಇತ್ತು. ಪರಿಸ್ಥಿತಿಯನ್ನು ಮನಗಂಡ ಸಚಿವ ಸಂಪುಟವು ಹಳೆಯ ಶೇ.50 ಮೀಸಲಾತಿಯಲ್ಲೇ ಅಧಿಸೂಚನೆ ಹೊರಡಿಸಲು ತೀರ್ಮಾನ ಕೈಗೊಂಡಿದ್ದು ಸ್ವಾಗತಾರ್ಹ ಕ್ರಮ ಎಂದು ತಿಳಿಸಿದರು.ನ್ಯಾಯಲಾಯದ ತೀರ್ಪು ಬರುವವರೆಗೂ ಕಾಲಹರಣ ಮಾಡದೇ, ಯುವಕರು, ನಿರುದ್ಯೋಗಿಗಳ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ಛಲವಾದಿ ಸಮಾಜದ ಸಂಪೂರ್ಣ ಬೆಂಬಲವಿದೆ. ನಮ್ಮ ಸಮಾಜದ ಸಚಿವರು, ಧಾರ್ಮಿಕ ಗುರುಗಳ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯವಾಗಿ ನಿಂದಿಸುತ್ತಿರುವುದು ಅಕ್ಷಮ್ಯ. ಮೈಸೂರು, ನೆಲಮಂಗಲ ಮೂಲದ ಇಬ್ಬರು ವ್ಯಕ್ತಿಗಳು ನಮ್ಮ ಸಮುದಾಯದ ಸಚಿವರನ್ನು ಖಳರಂತೆ ಬಿಂಬಿಸುತ್ತ, ತೇಜೋವಧೆ ಮಾಡುತ್ತಿದ್ದಾರೆ ಎಂದರು.
ಒಳಮೀಸಲಾತಿ ವಿಚಾರದಲ್ಲಿ ಸಚಿವರು ಸಭೆ ಮಾಡಿ, ಚರ್ಚಿಸುತ್ತಿದ್ದಾರೆಯೇ ಹೊರತು, ಯಾರೂ ಒಳ ಮೀಸಲಾತಿ ವಿರೋಧಿಗಳಲ್ಲ. ಯಾವುದೇ ಸಮಸ್ಯೆಗಳಿದ್ದರೆ ಕುಳಿತು, ಚರ್ಚಿಸುವ ಬದಲಿಗೆ ಸಾರ್ವಜನಿಕವಾಗಿ ನಿಂದಿಸುವುದು ಸರಿಯಲ್ಲ. ಅಂತಹ ಕಿಡಿಗೇಡಿಗಳ ವರ್ತನೆಯನ್ನು ಛಲವಾದಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಸಮಾಜದ ಮುಖಂಡರು, ಸಚಿವರ ಗೌರವಕ್ಕೆ ಧಕ್ಕೆ ತರುವ ಕೆಲಸ ಮುಂದುವರಿಸಿದರೆ ಕಾನೂನು ಕ್ರಮದ ಜೊತೆಗೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎ.ಡಿ. ಕೊಟ್ರಬಸಪ್ಪ, ಎಲ್.ಟಿ. ಮಧುಸೂದನ್, ಜಯಪ್ಪ, ವೀರಸ್ವಾಮಿ, ಟಿ.ಎಸ್. ರಾಮಯ್ಯ, ಜಯಪ್ಪ, ಅಣ್ಣಪ್ಪ, ಚಂದ್ರಪ್ಪ, ವೀರಸ್ವಾಮಿ, ಗಿರೀಶ, ಎಂ.ಹಾಲೇಶ ಬಸವನಾಳು, ಅಣ್ಣಪ್ಪ ತಣಿಗೆರೆ, ಪ್ರಭಾಕರ ಇತರರು ಇದ್ದರು.
ವರದಿ ಬಲಿಂದ ಛಲವಾದಿ ಸಮಾಜಕ್ಕೆ ಅನ್ಯಾಯನ್ಯಾ.ಸದಾಶಿವ ಆಯೋಗದ ವರದಿ ಸಲ್ಲಿಕೆಯಾದಾಗ ಛಲವಾದಿ ಸಮಾಜದ ಜನಸಂಖ್ಯೆ ಹೆಚ್ಚಾಗಿದೆಯೆಂಬ ವರದಿ ಇತ್ತು. ಆದರೆ, ಈಗಿನ ನ್ಯಾ.ನಾಗಮೋಹನ ದಾಸ್ ವರದಿಯಲ್ಲಿ ನಮ್ಮ ಸಮಾಜದ ಸಂಖ್ಯೆ ಕಡಿಮೆ ತೋರಿಸಲಾಗಿದೆ. ಈ ಅಂಕಿ ಅಂಶಗಳು ನಮ್ಮ ಸಮುದಾಯದ ಬಗ್ಗೆ ನಿಖರ ಮಾಹಿತಿ ಇಲ್ಲದಂತಾಗಿದೆ. ಪದೇಪದೇ ಬದಲಾಗುತ್ತಿರುವ ವರದಿಗಳಿಂದಲೂ ಛಲವಾದಿ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ಎಂದು ಗೌರವಾಧ್ಯಕ್ಷ ಎಸ್.ಶೇಖರಪ್ಪ ದೂರಿದರು.
ನಮ್ಮ ಸಮುದಾಯಕ್ಕೆ ಈಗಾಗಲೇ ಎಬಿಸಿ ಅನ್ವಯ ವಿದ್ಯಾಭ್ಯಾಸ ಮತ್ತು ನೇಮಕಾತಿಗಳಲ್ಲಿ ಉದ್ಯೋಗಾವಕಾಶವನ್ನು ಹಿಂದಿನ ರೋಸ್ಟರ್ ಪದ್ಧತಿ ಮುಂದುವರಿಸಲು ಸಮಾಜವು ಒತ್ತಾಯಿಸುತ್ತದೆ ಎಂದರು.