ಸಾರಾಂಶ
ಕಲಾ ಆಸಕ್ತರನ್ನು ಮನರಂಜಿಸಿದ ಮಕ್ಕಳ ವಚನ ನೃತ್ಯ । ಕಣ್ಮನ ಸೆಳೆದ ಬಸವ ಜಯಂತಿ ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಲಬುರಗಿ / ಶಹಾಬಾದಇಲ್ಲಿನ ಹಳೇ ಶಹಾಬಾದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಜರುಗಿದ ವಚನ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ಮೂಡಿಬಂದ ವಚನ ನೃತ್ಯವು ನೆರೆದ ಕಲಾ ಆಸಕ್ತರ ಮನರಂಜಿಸುವಲ್ಲಿ ಯಶಸ್ವಿಯಾಯಿತು.
ಶಹಾಬಾದ ಪಟ್ಟಣದ ಹಳೇ ಶಹಾಬಾದಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಹಳೇ ಶಹಾಬಾದ ಇವರ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಹಾಬಾದಿನ ದಿ.ಸ್ಪಿರಿಟ್ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ಪ್ರಮೋದ ನಾಟೀಕರ ನಿರ್ದೇಶನದಲ್ಲಿ ಅಣ್ಣ ಬಸವಣ್ಣ ಸೇರಿದಂತೆ ಬಸವಾದಿ ಶರಣರ ವಚನಗಳ ಮೇಲೆ ನೃತ್ಯ ಮಾಡಿ ಕಣ್ಮನ ಸೆಳೆದರು.ಸೋಜಿಗಾದ ಸೂಜು ಮಲ್ಲಿಗೆ, ಏನ್ ಕೊಡ ಏನ್ ಕೊಡವಾ ಹುಬ್ಬಳ್ಳಿ ಮಾಠ ಎಂತಹ ಚೆಂದುಳ್ಳಿ ಕೊಡವಾದಂತಹ ಜಾನಪದ ಗೀತೆಗಳ ನೃತ್ಯಕ್ಕೂ ವೇದಿಕೆ ಸಾಕ್ಷಿಯಾಯಿತು. ಕು.ಸೌಮ್ಯ ಎಸ್.ಪಾಟೀಲ ಅವರ ಮುಗ್ಧ ನೃತ್ಯ ಕಲಾಭಿಮಾನಿಗಳ ಮನ ತಣಿಸಿತು.
ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಗಾರ ಅವರು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ದೇಶದಲ್ಲಿ ಇಂದಿಗೂ ಮಹಿಳೆಯರಿಗೆ ಶೇ.33 ಮೀಸಲಾತಿ ಮರೀಚಿಕೆಯಾಗಿಯೆ ಉಳಿದಿದೆ. ಆದರೆ 12ನೇ ಶತಮಾನದಲ್ಲಿಯೆ ಮಹಿಳೆಯರಿಗೆ ಸಮಾನತೆಯ ಸ್ವಾತಂತ್ರ್ಯ ನೀಡುವ ಮೂಲಕ ಲಿಂಗಬೇಧ ತೊರೆದವರು ಬಸವಣ್ಣನವರು ಎಂದರು.ವೈಚಾರಿಕತೆ ಬೆಳೆಸಿಕೊಳ್ಳಿ:
ಲಿಂಗ ಧಾರಣೆ, ವಿಭೂತಿ ಬಳಕೆ ಬಗ್ಗೆ ತಾಯಂದಿರು ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ವಚನ ಪುಸ್ತಕ ಕೊಟ್ಟು ಅರಿವಿನ ದಾಹ ನೀಗಿಸಬೇಕು. ಬಸವಣ್ಣನವರು ಹೇಳಿದಂತೆ ಅಂಧಕಾರ, ಮೂಡನಂಬಿಕೆಯಿಂದ ಹೊರಬಂದು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಚಿಂತಕ ಸಂತೋಷ ಹೂಗಾರ ಅಭಿಪ್ರಾಯಪಟ್ಟರು.12ನೇ ಶತಮಾನದಲ್ಲಿ 50 ಮಹಿಳೆಯರು ಒಳಗೊಂಡಂತೆ 770 ಬಸವಾದಿ ಶರಣರನ್ನು ಅಂದಿನ ಸಂಸತ್ತು ಅನುಭವ ಮಂಟಪದಲ್ಲಿ ಸ್ಥಾನ ಕಲ್ಪಿಸಿದ ಶ್ರೇಯಸ್ಸು ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಸಲ್ಲುತ್ತದೆ. ಮೇಲ್ವರ್ಗದಲ್ಲಿ ಜನಿಸಿದ್ದರು, ಜೀವನದುದ್ದಕ್ಕೂ ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕಲ್ಪಿಸಲು, ಹೋರಾಡಿದ ಅಣ್ಣ ಬಸವಣ್ಣ ವಿಶ್ವ ಕಂಡ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಹಳೇ ಶಹಾಬಾದ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ನರೇಂದ್ರ ವರ್ಮಾ, ಭಂಕೂರ ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುಧೋಳಕರ್, ಯುವ ಮುಖಂಡರಾದ ಮಹಾಂತಗೌಡ ಪೊಲೀಸ್ ಪಾಟೀಲ, ಅಭಿಷೇಕ್ ಮಾಲಿಪಾಟೀಲ, ಅಣವೀರ ದ್ಯಾಮಾ, ರವಿ ಮಿರಸ್ಕರ್, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಚೆನ್ನಮಲ್ಲಪ್ಪ ಸಿನ್ನೂರ, ಕುಪೇಂದ್ರ ತುಪ್ಪದ, ಗಿರಿಮಲ್ಲಪ್ಪ ವಳಸಂಗ್, ರಮೇಶ ಜೋಗ್ದನಕರ್ ಸೇರಿದಂತೆ ಪಟ್ಟಣದ ಮುಖಂಡರು, ಸಾರ್ವಜನಿಕರು, ತಾಯಂದಿರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ವಚನೋತ್ಸವ ಸಮಿತಿ ಸದಸ್ಯ ಶರಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಪ್ಪ ಹಡಪದ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಹಡಪದ ನಿರೂಪಿಸಿ ವಂದಿಸಿದರು.
---------------------------ಹಳೇ ಶಹಾಬಾದಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಹಾಬಾದಿನ ದಿ.ಸ್ಪಿರಿಟ್ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ವಚನ ನೃತ್ಯವನ್ನು ಮಾಡಿ ರಂಜಿಸಿದರು.