ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸ್ವ-ಗ್ರಾಮದ ಸೊಸೈಟಿ ಚುನಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ಎಷ್ಟೇ ಭದ್ರತೆ ಹಾಕಿಸಿದ್ದರೂ ನನ್ನೂರಿನ ಜನರು ಸಂಪೂರ್ಣವಾಗಿ ನಮ್ಮ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಚುನಾಯಿಸಿ ಕಳುಹಿಸಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ತಾಲೂಕಿನ ಯಗಚಗುಪ್ಪೆ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಗಂಜೀಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಒಗ್ಗೂಡಿ ಮಲೆ ಮಹದೇಶ್ವರಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ನೇರವೇರಿಸಿ ಮಾತನಾಡಿದರು.
ಕ್ಷೇತ್ರದ ಶಾಸಕನಾಗಿ ನಾನು ಯಾವುದೇ ಸಹಕಾರ ಸಂಘಗಳಿಗೂ ಚುನಾವಣೆ ವೇಳೆ ಡಿ.ಆರ್ ವ್ಯಾನ್ ಹಾಕಿಸಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಎನ್.ಚಲುವರಾಯಸ್ವಾಮಿ ನನ್ನ ಸ್ವಗ್ರಾಮ ಹರಳಹಳ್ಳಿಯ ಸೊಸೈಟಿ ಚುನಾವಣೆಗೆ 3 ಡಿ.ಆರ್. ವ್ಯಾನ್ ಪೊಲೀಸ್ ಪಡೆ, ಇಬ್ಬರು ಪೊಲೀಸ್ ನಿರೀಕ್ಷಕರನ್ನು ಹಾಕಿಸಿದ್ದರು. ಆದರೂ ನಮ್ಮವರ ಗೆಲುವಿಗೆ ತೊಂದರೆಯಾಗಲಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ನನ್ನ ಅಭ್ಯಂತರವಿಲ್ಲ. ಅವರ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸವನ್ನು ಮಾಡಿದ್ದಾರೆ. ಅದೇ ರೀತಿ ನನಗೂ ನನ್ನ ಕಾರ್ಯಕರ್ತರಿಗೆ ಅಗತ್ಯ ರಕ್ಷಣೆ ಮತ್ತು ಉತ್ಸಾಹ ತುಂಬುವ ಹಕ್ಕಿದೆ ಎಂದು ಹೇಳಿದರು.
ಇತ್ತೀಚೆಗೆ ಮನ್ಮುಲ್ ಚುನಾವಣೆಯಲ್ಲಿ ವಿಜೇತನಾದ ನಿರ್ದೇಶಕನೊಬ್ಬ ಗೆದ್ದ ಅಮಲಿನಲ್ಲಿ ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿದ್ದಾನೆ. ನನಗೂ ಏಕ ವಚನದಲ್ಲಿ ಮಾತನಾಡಲು ಬರುತ್ತದೆ. ಆದರೆ, ಶಾಸಕತ್ವದ ಘನತೆ ಮತ್ತು ಗೌರವವನ್ನು ಕುಗ್ಗಿಸುವ ಕೆಲಸ ಮಾಡಬಾರದೆಂದು ಸಹಿಸಿಕೊಂಡಿದ್ದೇನೆ ಎಂದು ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ವಿರುದ್ಧ ಶಾಸಕರು ಹರಿಹಾಯ್ದರು.ಈ ಹಿಂದೆ ಕೆ.ಸಿ.ನಾರಾಯಣಗೌಡ ಜೆಡಿಎಸ್ ಶಾಸಕರಾಗಿದ್ದಾಗ ನಾನು ನನ್ನ ಶೀಳನೆರೆ ಹೋಬಳಿ ಜವಾಬ್ದಾರಿ ತೆಗೆದುಕೊಂಡಿದ್ದೆ. ಆ ವೇಳೆ ನಮಗೆ ಕಾಂಗ್ರೆಸ್ ಪಕ್ಷ ಎದುರಾಳಿ. ಜನರ ಒತ್ತಾಸೆ ಮೇರೆಗೆ ನಾನು ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದರು.
ಅವಿರೋಧ ಆಯ್ಕೆಯ ಉದ್ದೇಶವಿದ್ದರೂ ಕಾಂಗ್ರೆಸ್ಸಿಗರು ಇದಕ್ಕೆ ಅವಕಾಶ ಕೊಡಲಿಲ್ಲ. ಅಂದಿನ ಚುನಾವಣೆಯಲ್ಲಿ ನನ್ನೂರಿನ ಜನ ನನಗೆ 967 ಮತಗಳಲ್ಲಿ 921 ಮತಗಳನ್ನು ನನಗೆ ನೀಡಿದ್ದರಲ್ಲದೆ ನಮ್ಮ ಗುಂಪಿನ ಎಲ್ಲರಿಗೂ 850 ಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸಿದ್ದರು ಎಂದು ಸ್ಮರಿಸಿದರು.ನಾನು ನಮ್ಮೂರಿನ ಸೊಸೈಟಿಗೆ ಪ್ರವೇಶಿದಾಗ ರೈತರಿಗೆ 67 ಲಕ್ಷ ರು ಮಾತ್ರ ಸಾಲ ನೀಡಲಾಗುತಿತ್ತು. ನನ್ನ ಅವಧಿಯಲ್ಲಿ ಇದು 4.80 ಕೋಟಿಗೆ ಏರಿಕೆಯಾಯಿತು. ನಮ್ಮ ವ್ಯಾಪ್ತಿಯ 83 ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡಿದ್ದಲ್ಲದೆ ನಮ್ಮ ವ್ಯಾಪ್ತಿಗೆ ಸೇರದಿದ್ದರೂ ನಮ್ಮ ಅಕ್ಕಪಕ್ಕದ ಬೇಲದಕೆರೆ, ಚನ್ನಾಪುರ, ಹೊಸೂರು ಗ್ರಾಮಗಳ ರೈತರಿಗೆ ಸಾಲ ನೀಡಲಾಯಿತು ಎಂದು ಹೇಳಿದರು.
ಸಹಕಾರ ಸಂಘಗಳ ಮೂಲಕ ರೈತರ ಸೇವೆ ಮಾಡಲು ಉತ್ತಮ ಅವಕಾಶಗಳಿವೆ. ನಿರ್ದೇಶಕರು ಸಂಘಗಳನ್ನು ಅಭಿವೃದ್ಧಿಪಡಿಸಿ ರೈತರ ನೆರವಿಗೆ ನಿಲ್ಲವಂತೆ ಕಿವಿಮಾತು ಹೇಳಿದರು.ಈ ವೇಳೆ ಮುಖಂಡರುಗಳಾದ ರಾಜಶೇಖರ್, ಹರೀಶ್, ಶಿವಪ್ಪ, ಕುಮಾರ್, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.