ಸಾರಾಂಶ
ಮುಂಡಗೋಡ: ೧೨ನೇ ಶತಮಾನದಲ್ಲಿ ಅಂಕು ಡೊಂಕಾಗಿದ್ದ ಸಮಾಜವನ್ನು ಸರಿದಾರಿಗೆ ತರಲು ಹೋರಾಟ ಮಾಡುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಪಣತೊಟ್ಟ ಬಸವಣ್ಣನವರ ತಂಡದಿಂದ ಹುಟ್ಟು ಹಾಕಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮುಂಡಗೋಡ ಕ್ಷೇತ್ರ ಸಂಪನ್ಮೂಲ ಶಿಕ್ಷಣ ಸಂಯೋಜಕ ಪಾಂಡುರಂಗ ಟಿಕ್ಕೋಜಿ ಹೇಳಿದರು.
ಬುಧವಾರ ಇಲ್ಲಿಯ ತಾಲೂಕು ಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಪಟ್ಟಣ ಪಂಚಾಯತ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ವಿಶ್ವಗುರು ಸಕಲ ಜೀವ ರಾಶಿಗೆ ಒಳಿತನ್ನು ಬಯಸುವ ಸಮಾಜದಲ್ಲಿದ್ದ ಜಾತಿ ಬೇಧ, ಮೇಲು ಕೀಳು ಎಂಬ ಅನಿಷ್ಟ ಪದ್ಧತಿಯನ್ನು ದಿಕ್ಕರಿಸಿ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮಬಾಳು ಎಂಬುವುದನ್ನು ಪ್ರತಿಪಾದಿಸಿದ ಮಹಾನ ದಾರ್ಶನಿಕರು. ೧೨ನೇ ಶತಮಾನದಲ್ಲಿಯೇ ಸಮಾಜಕ್ಕೆ ಮಾದರಿಯಾದಂತವರು. ಒಲವು ಹಾಗೂ ದೃಢತೆ ಇಲ್ಲದ ಪೂಜೆಯಿಂದ ಏನು ಪ್ರಯೋಜನವಿಲ್ಲ. ಪ್ರೀತಿ, ಒಲವಿನಿಂದ ಕೂಡಿದಂತ ಭಕ್ತಿಯಿಂದ ಮಾಡಿದ ಪೂಜೆ ಮಾತ್ರ ಫಲಪ್ರದವಾಗುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ.
೯೦೦ ವರ್ಷಗಳ ಹಿಂದಿನ ಅನುಭವ ಮಂಟಪವು ಜಗತ್ತಿಗೆ ಮಾದರಿಯಾಗಿದ್ದು, ಇದನ್ನು ಮಾದರಿಯಾಗಿಟ್ಟುಕೊಂಡು ನಮ್ಮ ಪಾರ್ಲಿಮೆಂಟ್ ಹಾಗೂ ವಿಶ್ವ ಸಂಸ್ಥೆಗಳು ಪ್ರಜೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸುವ ಕೆಲಸವನ್ನು ಮಾಡಲಾಗುತ್ತಿದೆ. ರಾಮಾಯಣ, ಮಹಾಭಾರತದಂತೆಯೇ ಅಧ್ಯಾತ್ಮ, ವಿಶ್ವಗುರು ಮಾನವತಾವಾದಿಯಾದಂತಹ ಬಸವಣ್ಣನವರ ತತ್ವಗಳನ್ನು ನಾವು ಕಿಂಚಿತ್ತಾದರೂ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾರ್ಥಕತೆ ಮೆರೆಯಬೇಕಿದೆ ಎಂದರು.ತಾಪಂ ಇಒ ಟಿ.ವೈ. ದಾಸನಕೊಪ್ಪ ಮಾತನಾಡಿ, ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಯಾವುದೇ ಕೆಲಸ ಹೆಚ್ಚು ಕಡಿಮೆ ಎಂಬ ಭಾವನೆ ಮರೆತು ನಾವು ಮಾಡುವ ಕೆಲಸದಲ್ಲಿಯೇ ಶ್ರೇಷ್ಠತೆ ಕಾಣುವ ಮೂಲಕ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡಿಗೆ ಗೌರವ ನೀಡಬೇಕು. ನಮ್ಮ ಸಂವಿಧಾನದಲ್ಲಿ ನಮಗಿರುವ ಮೂಲಭೂತ ಹಕ್ಕಿನೊಂದಿಗೆ ಅದನ್ನು ರಕ್ಷಿಸುವ ಕರ್ತವ್ಯ ಕೂಡ ನಮಗಿದೆ ಎಂದರು.
ಇದಕ್ಕೂ ಮುನ್ನ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಪೂಜೆ ಸಲ್ಲಿಸಲಾಯಿತು. ತಹಸೀಲ್ದಾರ ಶಂಕರ ಗೌಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಮಾತನಾಡಿದರು.ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಪಪಂ ಸದಸ್ಯ ಅಶೋಕ ಚಲವಾದಿ, ತಾಲೂಕು ಬಸವ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ, ಬಸವಣ್ಣ, ವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಸಮಿತಿ ಅಧ್ಯಕ್ಷ ಸಿ.ಎಸ್ ಗಾಣಿಗೇರ, ಉಪ ತಹಸೀಲ್ದಾರ ಜಿ.ಬಿ. ಭಟ್, ರಾಮಣ್ಣ ಕುನ್ನೂರ, ಸಂಗಮೇಶ ಬಿದರಿ, ಚಂದ್ರಶೇಖರ ಕರಿಗಾರ, ಎಸ್.ಫಕ್ಕೀರಪ್ಪ, ಬಾಬಣ್ಣ ಕೋಣನಕೇರಿ, ಮಂಜುನಾಥ ಪಾಟೀಲ, ಸಂಗಮೇಶ ಕೊಳ್ಳಾನವರ, ಚಿದಾನಂದ ಹರಿಜನ, ಬಿ.ಎಂ. ಕೋಟಿ, ನಾಗಪ್ಪ ಕಡಗಿ, ಕೆಂಜೋಡಿ ಗಲಬಿ, ಉಮೇಶ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು. ಕೆ.ಕೆ ಕುರುವಿನಕೊಪ್ಪ ಸ್ವಾಗತಿಸಿ ನಿರೂಪಿಸಿದರು.