ಡಾ.ಬಸವಲಿಂಗ ಪಟ್ಟದ್ದೇವರ ಸಮಾಜ ಸೇವೆ ಎಲ್ಲರಿಗೂ ಮಾದರಿ: ಸಚಿವ ಈಶ್ವರ ಖಂಡ್ರೆ

| Published : Jan 08 2024, 01:45 AM IST

ಡಾ.ಬಸವಲಿಂಗ ಪಟ್ಟದ್ದೇವರ ಸಮಾಜ ಸೇವೆ ಎಲ್ಲರಿಗೂ ಮಾದರಿ: ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ನಾಡೋಜ ಗೌರವಕ್ಕೆ ಪಾತ್ರರಾಗಿರುವ ಡಾ.ಬಸವಲಿಂಗ ಪಟ್ಟದ್ದೇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಡಾ.ಬಸವಲಿಂಗ ಪಟ್ಟದ್ದೇವರ ಸಮಾಜ ಸೇವೆ ನೆಮ್ಮಲ್ಲರಿಗೂ ಮಾದರಿಯಾಗಿದೆ. ಅಪ್ಪಟ ಬಸವತತ್ವ ಅನುಯಾಯಿ ಆಗಿ ಬಸವತತ್ವ ಪ್ರಸಾರದ ಜತೆಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸೇವೆ ಮೂಲಕ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನಕ್ಕೆ ಭಾನುವಾರ ಭೇಟಿ ನೀಡಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಪಾತ್ರರಾಗಿರುವ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರಿಗೆ ಶಾಲು ಹೊದಿಸಿ, ಅಭಿನಂದಿಸಿ ಅವರು ಮಾತನಾಡಿದರು.

ವಿಶೇಷವಾಗಿ ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಪಾಲನೆ ಪೋಷಣೆ ಮಾಡಿ ಶಿಕ್ಷಣ, ಸಂಸ್ಕಾರ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತಿರುವ ಪೂಜ್ಯರ ಕಾರ್ಯ ಶ್ಲಾಘನೀಯ. ಕೆಲವರು ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಬೀಳುವುದನ್ನು ಕಂಡಿದ್ದೇವೆ. ಆದರೆ ಡಾ.ಬಸವಲಿಂಗ ಪಟ್ಟದ್ದೇವರು ಎಂದಿಗೂ ಪ್ರಶಸ್ತಿ, ಪುರಸ್ಕಾರಗಳಿಗಾಗಿ ಕೆಲಸ ಮಾಡಿದವರಲ್ಲ. ಪೂಜ್ಯರ ಅನುಪಮ ಸೇವೆ ಗುರುತಿಸಿ ಸರ್ಕಾರ ಸೇರಿ ವಿವಿಧ ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿ ಗೌರವಿಸಿವೆ.

ಇದೀಗ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಗೌರವ ಪದವಿ ನೀಡಿ ಗೌರವಿಸುತ್ತಿರುವುದು ಶ್ರೀಮಠದ ಭಕ್ತನಾಗಿ ನನಗೆ ಹೆಮ್ಮೆ ತರಿಸಿದೆ. ಪೂಜ್ಯರ ಸಮಾಜ ಸೇವೆ ಹೀಗೆ ಮುಂದುವರೆಯಲಿ ಅವರ ಆಶೀರ್ವಾದ ಎಲ್ಲರ ಮೇಲೆ ಸದಾಕಾಲ ಇರಲಿ ಎಂದು ಹಾರೈಸಿದರು.

ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಶಕ್ತಿಯಿಂದ ಸಮಾಜದಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ವೈಯಕ್ತಿಕವಾಗಿ ಏನೇ ಪ್ರಶಸ್ತಿ, ಪುರಸ್ಕಾರ ಲಭಿಸಿದರೂ ಪೂಜ್ಯರ ಪಾದಗಳಿಗೆ ಸಮರ್ಪಿಸುತ್ತೇನೆ. ಒಳ್ಳೆಯ ಮನಸ್ಸು ನಾವು ಹೋಗುವ ದಾರಿ ಸರಿಯಿದ್ದರೆ ಎಲ್ಲವೂ ಒಳ್ಳೆಯದ್ದಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಇ ಶಿವಶಂಕರ ಕಾಮಶೆಟ್ಟಿ, ಎಇಇ ಅಲ್ತಾಫ್‌ಮಿಯ್ಯ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಜಿಪಂ ಮಾಜಿ ಸದಸ್ಯ ಅಂಬಾದಾಸ ಕೋರೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ, ರವೀಂದ್ರ ಚಿಡಗುಪ್ಪೆ, ಕಾಶಿನಾಥ ಲದ್ದೆ, ಶೈಲೇಶ ಚಳಕಾಪೂರೆ, ಮೋಹನ ರೆಡ್ಡಿ ಸೇರಿದಂತೆ ಹಲವರು ಇದ್ದರು. ಬಾಬು ಬೆಲ್ದಾಳ ನಿರೂಪಿಸಿದರು.