ಸಾರಾಂಶ
- ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಮೈಸೂರುಧರ್ಮಗುರುಗಳಾಗುವುದು ಸಾಮಾನ್ಯವಲ್ಲ, ಅದು ಪೂರ್ಣ ಅಧ್ಯಯನ ಮತ್ತು ಆಧ್ಯಾತ್ಮ ಸಾಧನೆಯಿಂದ ದೊರೆಯುವ ಒಂದು ಸೇವಾವಕಾಶ ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.
ಚಾಮುಂಡಿಬೆಟ್ಟ ಪಾದದ ರಸ್ತೆಯ ಗದ್ದಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಇಮ್ಮಡಿ ಶಿವಬಸವಸ್ವಾಮಿಗಳ 85ನೇ ಜಯಂತಿ ಸಂಸ್ಮರಣೋತ್ಸವ, ಡಾ. ಶರತ್ಚಂದ್ರಸ್ವಾಮಿಗಳ ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ವಿದ್ಯಾರ್ಥಿನಿಲಯ, ಗ್ರಂಥಾಲಯ ಕಟ್ಟಡ ಭೂಮಿಪೂಜೆ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮಗುರುಗಳಾದವರು ಹೆಚ್ಚು ಅಧ್ಯಯನಶೀಲರಾಗಬೇಕು. ನಡೆ- ನುಡಿಗಳು ಸಾತ್ವಿಕವಾಗಿರುವ ಜತೆಗೆ ಅಗಾಧವಾದ ಮಾನಸಿಕ ಸಿದ್ಧತೆ ಮತ್ತು ಬದ್ಧತೆ ಅಗತ್ಯ. ಆಗ ಸೇವೆಯಲ್ಲೂ ಬದ್ಧತೆಯಿಂದ ಇರುತ್ತದೆ ಎಂದರು.
ಸಮಾಜದ ಸೇವೆಗಾಗಿ ಧರ್ಮಗುರುಗಳಾಗಬೇಕೆನ್ನುವವರು ಕೂಡ ಅಧ್ಯಯನ ಬಿಡಬಾರದು. ಅಗಾಧವಾದ ಮಾನಸಿಕ ಸಿದ್ಧತೆ ಮತ್ತು ಸೇವಾ ಬದ್ಧತೆಗಳು ಅಗತ್ಯ. ಧರ್ಮಗುರುಗಳಾಗುವುದು ಅರ್ಜಿ ಹಾಕಿ ಗಳಿಸುವ ಉದ್ಯೋಗವಲ್ಲ. ಬಂಡವಾಳ ವಿನಿಯೋಗಿಸಿ ಲಾಭಗಳಿಸುವ ಉದ್ಯಮವೂ ಅಲ್ಲ. ಅದೃಷ್ಟದಿಂದ ಸಿಗುವ ಬಹುಮಾನವಲ್ಲ. ವಂಶಪರಂಪರೆಯ ಪ್ರಾಪ್ತಿಯಲ್ಲ ಎಂದರು.ಸಮಾಜದ ಸಾಂಸ್ಕೃತಿಕ ಬದುಕು ಕಟ್ಟಿಕೊಡಲು ಸರ್ಕಾರಗಳಿಂದ ಸಾಧ್ಯವಾಗದು. ಆದರೆ ಆ ಕಾರ್ಯವನ್ನು ಮಠಗಳು, ಧರ್ಮಗುರುಗಳು ಮಾಡುತ್ತಾರೆ. ಸರ್ಕಾರ ಕೇವಲ ಭೌತಿಕ ಅಭಿವೃದ್ಧಿಯನ್ನಷ್ಟೇ ನೋಡಿಕೊಳ್ಳುತ್ತದೆ. ಯಾವುದೋ ಒಂದು ಮಠ ಅಥವಾ ಮಠಾಧಿಪತಿ ಎಲ್ಲೋ ಮಾಡಿದ ತಪ್ಪನ್ನು ನಾವು ಸಾರ್ವತ್ರಿಕವಾಗಿ ಎಲ್ಲಾ ಮಠಗಳಿಗೆ ಅನ್ವಯಿಸುವುದು ಸರಿಯಲ್ಲ. ಸರ್ಕಾರಗಳಿಗಿರುವ ಕಾನೂನಿನ ಅಧಿಕಾರ ಧರ್ಮಗುರುಗಳಿಗೆ ಇಲ್ಲದಿದ್ದರೂ, ಮಠಾಧಿಪತಿಗಳು, ಜನಸಮುದಾಯ ಅವರ ಬಗೆಗೆ ಇಟ್ಟುಕೊಂಡಿರುವ ಶ್ರದ್ಧಾಭಕ್ತಿಯ ಬಲದಿಂದ, ನಿಜವಾದ ಅರ್ಥದಲ್ಲಿ ಸಮಾಜ ಜಾಗೃತಿ ಮತ್ತು ಸುಧಾರಣೆಯ ಕೆಲಸವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಿದೆ ಎಂದರು.
ಮಠಾಧಿಪತಿಗಳೂ ಶರಣರ ವಿಚಾರಧಾರೆಯಂತೆ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಆಧ್ಯಾತ್ಮಿಕ ಸಾಧನೆ ಮಾಡಿರಬೇಕು. ತೀವ್ರ ವೇಗದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವಸ್ತುನಿಷ್ಟ ನೆಲೆಯಲ್ಲಿ ಸಮಾಜದ ಸೇವೆ ಸಲ್ಲಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.ಡಾ. ಇಮ್ಮಡಿ ಶಿವಬಸವ ಸ್ವಾಮೀಜಿ ಅವರು ಅಂತಹ ಮಾದರಿ ಗುರುಗಳಾಗಿದ್ದರು. ಅವರು ಕುಂದೂರು ಮಠಾಧಿಪತಿಯಾಗಿದ್ದರೂ, ಎಂದಿಗೂ ಅದನ್ನು ತೋರಿಸಿಕೊಳ್ಳದೆ ಎಲ್ಲರೊಡನೊಂದಾಗಿ ಕೇವಲ ಸಾಹಿತ್ಯಾಧ್ಯಯನ, ಸಾಹಿತ್ಯ, ಸಂಶೋಧನೆ, ಮತ್ತು ಪ್ರಸಾರ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಸರಳ ಜೀವನ ಅವರದ್ದು ಎಂದು ಬಣ್ಣಿಸಿದರು. ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿ ಅವರೊಡನೆ ಡಾ. ಇಮ್ಮಡಿ ಶಿವಬಸವ ಸ್ವಾಮೀಜಿ ಅವರು ಇಟ್ಟುಕೊಂಡಿದ್ದ ಅವಿನಾಭಾವ ಸಂಬಂಧ ಅನನ್ಯವಾದದ್ದು. ರಾಜೇಂದ್ರ ಗುರುಗಳ ಸಂಪರ್ಕದಲ್ಲಿದ್ದ ನನಗೆ, ಅವರೊಡನೆ ಸದಾ ಇರುತ್ತಿದ್ದ ಇಮ್ಮಡಿ ಶಿವಬಸವ ಸ್ವಾಮೀಜಿ ಅವರ ಸಂಪರ್ಕವೂ ದೊರಕುವಂತಾಯಿತು. ನಾನು 40 ವರ್ಷಗಳ ಕಾಲ ಸ್ವಾಮೀಜಿ ಜತೆ ಸಂಪರ್ಕದಲ್ಲಿದೆ. ನಾನು ಕಂಡಂತೆ ಅವರು ಬೇರ್ಯಾವ ಚಟುವಟಿಕೆಗಳಿಗೂ ಗಮನ ಕೊಡದೆ ಪೂರ್ಣವಾಗಿ ಸಾಹಿತ್ಯ ಚಿಂತನೆಯಲ್ಲೇ ಇದ್ದವರು. ಸನ್ಯಾಸಧರ್ಮವನ್ನು ಸ್ವೀಕರಿಸಿದರೂ ಕಾವಿ ಧರಿಸದೆ ಶ್ವೇತವಸ್ತ್ರಧಾರಿಯಾಗಿದ್ದವರು. ಶರಣ ಸಂಸ್ಕೃತಿಯಂತೆ ಅಂತರಂಗ-ಬಹಿರಂಗ ಶುದ್ಧವಾಗಿದ್ದವರು. ಲೋಕ ಪ್ರಜ್ಞಾವಿಕಾಸಕ್ಕೆ ಸಾಹಿತ್ಯ ಒಂದು ಪ್ರಭಾವ ಪೂರ್ಣಮಾಧ್ಯಮ ಎಂಬುದನ್ನು ಮನಗಂಡು ಸಾಹಿತ್ಯ ಸೇವೆಗೆ ಆದ್ಯತೆ ಕೊಟ್ಟಿದ್ದಾಗಿ ಹೇಳಿದರು.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತುಮಕೂರು ಸಿದ್ಧಗಂಗಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಇಮ್ಮಡಿ ದೀಪ್ತಿ ಚಿತ್ರಸಂಪುಟವನ್ನು, ಗದಗದ ತೋಂಟದಾರ್ಯ ಮಹಾಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅವರು ದಿ ರಿಯಲ್ ಸ್ಟ್ಯಾಂಡ್ ಕೃತಿಯನ್ನು, ಶ್ರೀಮಠದ ಆಪ್ ಅನ್ನು ಕನಕಪುರ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮೀಜಿ, ಮಿಲಿಂದ ಪ್ರಶ್ನೆ ಕೃತಿಯನ್ನು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಕೃತಿಯನ್ನು ಹೊಸದಿಲ್ಲಿ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಬಿಡುಗಡೆಗೊಳಿಸಿದರು.ಶಾಸಕರಾದ ಎಚ್.ಎಂ. ಗಣೇಶಪ್ರಸಾದ್, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮೊದಲಾದವರು ಇದ್ದರು.