ಸಾರಾಂಶ
ಸಿರಿಗೆರೆ: ಬಸವಣ್ಣನವರ ತತ್ವ ಸಿದ್ಧಾಂತ, ಸಮಸಮಾಜ, ಜಾತ್ಯಾತೀತ, ಭ್ರಾತೃತ್ವ ಎಲ್ಲವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಸಮೀಪದ ಸಾಸಲು ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರ ಚಿಂತನೆಗಳು ಒಂದೇ ಆಗಿದ್ದವು. ಅವರ ಆಶಯಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಸಂಪತ್ತು ಸಮಾನ ಹಂಚಿಕೆ ಮತ್ತು ಸಮಸಮಾಜ ನಿರ್ಮಾಣ ಆಗಬೇಕು ಎನ್ನುವ ಕನಸು ಬಸವಣ್ಣನವರದ್ದಾಗಿತ್ತು. ಅದೇ ರೀತಿ ಅಂಬೇಡ್ಕರ್ ಅವರ ಕನಸು ಆಗಿತ್ತು. ಸಂವಿಧಾನ ರಚಿಸುವ ವೇಳೆ ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಪ್ರಸ್ತುತ ಸಂವಿಧಾನಕ್ಕೆ ಬಹಳ ದೊಡ್ಡ ಕಂಟಕ ಎದುರಾಗಿದೆ. ಅಂಬೇಡ್ಕರ್ ಅಂದರೆ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯ ಮನೆಯ ಅಂಗಳದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದು ನಾಡಿಗೆ ಉತ್ತಮ ಸಂದೇಶ. ಅಂಬೇಡ್ಕರ್ ಜಯಂತಿ ಆಚರಿಸಬೇಕು ಮಾದಿಗ ಮತ್ತು ದಲಿತ ಸಮುದಾಯ ಬಸವಣ್ಣ ಜಯಂತಿ ಆಚರಿಸಬೇಕು ಈ ಮೂಲಕ ಸಮುದಾಯದ ಮಧ್ಯೆ ಕಂದಕ ಏರ್ಪಡಿಸುವಂತವರಿಗೆ ಉತ್ತರ ಕೊಡಬೇಕು ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ತತ್ವ ಸಿದ್ದಾಂತಗಳನ್ನು ನಮ್ಮಲ್ಲಿ ನಾವುಗಳು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಅಸಮಾನತೆ ಅಸ್ಪೃಶ್ಯತೆ, ನಿವಾರಣೆ ಆಗಲು ಸಾಧ್ಯ, ಅದು ಈಗಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ದೇಶಕ್ಕೆ ಸಂವಿಧಾನದ ಕೊಡುಗೆ ನೀಡಿರುವ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದರು. ಮುತ್ತುಗದೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಾತನಾಡಿ, ಸಂವಿಧಾನದ ಉಳಿವು ನಮ್ಮ ಬದುಕನ್ನು ಅವಲಂಭಿಸಿದೆ, ಕೇಂದ್ರದಲ್ಲಿ ಇರುವ ಸರ್ವಾರ್ಧಿಕಾರಿ ಆಡಳಿತವನ್ನು ಕಿತ್ತೇಸೆದಾಗ ಮಾತ್ರ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಓಂಕಾರಸ್ವಾಮಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕೇಂದ್ರ ಸರ್ಕಾರ ಅಂದ್ರೆ ಅದಾನಿ, ಅಂಬಾನಿ ಎನ್ನುವಂತರ ಕೇವಲ ನಾಲ್ಕಾರು ಮಂದಿ ಕೈಯಲ್ಲಿದೆ. ನ್ಯಾಯಯುತವಾದ ಬೇಡಿಕೆ ಕೇಳುವ ರೈತರನ್ನು, ಶೋಷಿತರನ್ನು ದೇಶದ್ರೋಹಿಗಳು ಎಂದು ಬಿಂಬಿಸುತ್ತಿದ್ದಾರೆ. ವೈಜ್ಞಾನಿಕ ಬೆಲೆ ನೀಡಿ ಎಂದು ಕೇಳಿದ ರೈತರಮೇಲೆ ಗುಂಡು ಹಾರಿಸಲಾಗುತ್ತಿದೆ. ನೊಂದ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇವುಗಳಿಗೆಲ್ಲ ಕಡಿವಾಣ ಹಾಕಲು ಅಂಬೇಡ್ಕರ್ ಕೊಟ್ಟಿರುವ ಮತದಾನದ ಅಸ್ತ್ರವನ್ನು ಜನರು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಶಿವಪುರ ಶಿವಕುಮಾರ್. ಮಾಜಿ ಉಪಾಧ್ಯಕ್ಷ ಗಂಗಾಧರ್, ಮಾಜಿ ಸದಸ್ಯರಾದ ಡಿ.ಕೆ.ಶಿವಮೂರ್ತಿ, ರಂಗಸ್ವಾಮಿ, ಆರ್.ನರಸಿಂಹರಾಜು, ಲೋಹಿತ್ ಕುಮಾರ್, ಸಮಾಜದ ಹಿರಿಯ ಮುಖಂಡ ರಂಗಯ್ಯ, ರುದ್ರೇಗೌಡ, ಗೋಡೆಮನೆ ಹನುಮಂತಪ್ಪ ಇದ್ದರು.