ಬಸವಣ್ಣ ಒಂದೇ ಸಮಾಜಕ್ಕೆ ಸೀಮಿತ ಬೇಡ: ಡಿಕೆ

| Published : Sep 07 2025, 01:00 AM IST

ಸಾರಾಂಶ

ನಾಡಿನ ಸಾಂಸ್ಕೃತಿಕ, ಸಾಮಾಜಿಕ ನಾಯಕರಾದ ಬಸವಣ್ಣನವರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು.‌ ಅವರು ಸರ್ವ ಸಮುದಾಯದ ನಾಯಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಿನ ಸಾಂಸ್ಕೃತಿಕ, ಸಾಮಾಜಿಕ ನಾಯಕರಾದ ಬಸವಣ್ಣನವರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು.‌ ಅವರು ಸರ್ವ ಸಮುದಾಯದ ನಾಯಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಜಂಕ್ಷನ್‌ನಲ್ಲಿ ಶನಿವಾರ ಬಿಬಿಎಂಪಿಯಿಂದ ನಿರ್ಮಿಸಿದ ಬಸವೇಶ್ವರರ ಪುತ್ಥಳಿ ಅನಾವರಣ ಮತ್ತು ಮಾತೆಂಬುದು ಜ್ಯೋತಿರ್ಲಿಂಗ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು.

ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜ್ಞಾನ, ಭಕ್ತಿ ಮತ್ತು ಕರ್ಮಗಳ ಸಂಗಮವಾಗಿರುವ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಯು ಮುಂದಿನ ಯುವಜನತೆಗೆ ಆದರ್ಶವಾಗಿದ್ದು, ಅನುಕರಣೆ ಮಾಡಿದರೆ ಸಮ ಸಮಾಜದೊಂದಿಗೆ ಜ್ಞಾನದ ಸಮಾಜ ನಿರ್ಮಾಣ ಸಾಧ್ಯ ಎಂದರು.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಟ್ಟಿದ್ದು 12ನೇ ಶತಮಾತನದ ಬಸವಣ್ಣನವರ ಪರಂಪರೆಯಾಗಿದೆ. ಬಸವಣ್ಣ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂಬ ಮನಸ್ಸು ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿಸುವ ಮೂಲಕ ಸಮ ಸಮಾಜದ ನಿರ್ಮಾಣ ಮಾಡಿದ ಕಾಯಕಯೋಗಿ ಬಸವೇಶ್ವರರು. ಕಾಯಕ ಮಹತ್ವ ಮತ್ತು ಜ್ಞಾನ ಬೆಳಕನ್ನು ವಿಶ್ವಕ್ಕೆ ಚಲ್ಲುವ ಮೂಲಕ ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ ಎಂದರು.ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿದರು. ಈ ವೇಳೆ ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ, ಶಾಸಕರಾದ ಕೆ.ಗೋಪಾಲಯ್ಯ, ಪುಟ್ಟಣ್ಣ, ಮಾಜಿ ಶಾಸಕ ಎಚ್.ಎಂ.ರೇವಣ್ಣ, ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಸಿ.ಸೋಮಶೇಖರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರಾಧ್ಯಕ್ಷ ನವೀನ್ ಕುಮಾರ್ ಮೊದಲಾದವರಿದ್ದರು.