ಸಾರಾಂಶ
ಇಂದು ರಾತ್ರಿ 8.58ರಿಂದ ಖಗ್ರಾಸ ಚಂದ್ರಗ್ರಹಣ ಆರಂಭವಾಗಲಿದ್ದು, ತಡರಾತ್ರಿ 2ಗಂಟೆವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಸಂಜೆ ಬಳಿಕ ದೇವಸ್ಥಾನ ಬಂದ್ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇಂದು ರಾತ್ರಿ 8.58ರಿಂದ ಖಗ್ರಾಸ ಚಂದ್ರಗ್ರಹಣ ಆರಂಭವಾಗಲಿದ್ದು, ತಡರಾತ್ರಿ 2ಗಂಟೆವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಸಂಜೆ ಬಳಿಕ ದೇವಸ್ಥಾನ ಬಂದ್ ಮಾಡಲಾಗುತ್ತಿದೆ.ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಒಳಭಾಗದಲ್ಲಿ ಸತ್ಯನಾರಾಯಣ ಮೂರ್ತಿ ಎದುರು ಸತ್ಯನಾರಾಯಣ ಪೂಜೆ, ನಂತರ ಪ್ರಸಾದ ವಿತರಣೆ ಮಾಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಬಳಿಕ ಮಧ್ಯಾಹ್ನ 3ರಿಂದ ದೇವಸ್ಥಾನವನ್ನು ಬಂದ್ ಮಾಡಲಾಗುವುದು.
ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ರಿಂದ ಬಂದ್ ಆಗಿರಲಿದೆ. ಬೆಳಗ್ಗೆ 11 ಗಂಟೆಗೆ ಗವಿಗಂಗಾಧರೇಶ್ವರನಿಗೆ ಅಭಿಷೇಕ ಮಾಡಿದ ನಂತರ ದೇಗುಲದ ಬಾಗಿಲು ಹಾಕಲಾಗುವುದು ಎಂದು ಆಡಳಿತ ತಿಳಿಸಿದೆ. ಸೋಮವಾರ ಬೆಳಗ್ಗೆ ದೇಗುಲ ಮತ್ತೆ ಭಕ್ತರಿಗೆ ಮುಕ್ತವಾಗಲಿದೆ. ಸೂರ್ಯೋದಯದ ನಂತರ ದೇವಸ್ಥಾನ ಶುದ್ಧಿ ಮಾಡಲಿದ್ದೇವೆ. ಬಳಿಕ ದೇವರಿಗೆ ಅಭಿಷೇಕ ಹಾಗೂ ಮಹಾಮಂಗಳಾರಾತಿ ಮಾಡುವುದಾಗಿ ಅರ್ಚಕರು ತಿಳಿಸಿದರು.ಅದರಂತೆ ಬನಶಂಕರಿ ದೇವಸ್ಥಾನದಲ್ಲಿ ಎಂದಿನಂತೆ ದಿನನಿತ್ಯದ ಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6ಗಂಟೆಗೆ ದೇವಸ್ಥಾನ ಬಂದ್ ಮಾಡಲಾಗುವುದು ಎಂದು ಆಡಳಿತಾಧಿಕಾರಿ ತಿಮ್ಮಪ್ಪ ತಿಳಿಸಿದರು. ಇನ್ನು, ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12.20ಕ್ಕೆ , ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ 7 ಗಂಟೆಗೆ, ಮೆಜೆಸ್ಟಿಕ್ನಲ್ಲಿನ ಅಣ್ಣಮ್ಮ ದೇವಾಲಯ 8ಕ್ಕೆ ಬಂದ್ ಆಗಲಿವೆ.
ಮಳೆ ಆಗುತ್ತಿರುವ ಕಾರಣ ಗ್ರಹಣ ನೋಡಲು ಕಷ್ಟ. ಟೆಲಿಸ್ಕೋಪ್ ಬಳಸಿದರೆ ಚಂದಿರನ ಮೇಲ್ಮೈ ಅನ್ನು ಇನ್ನಷ್ಟು ವಿವರವಾಗಿ ನೋಡಬಹುದು. ನೆಹರು ತಾರಾಲಯದಲ್ಲಿ ಈ ಕುರಿತು ಉಪನ್ಯಾಸ ಕಾರ್ಯಕ್ರಮ ಮತ್ತು ಟೆಲಿಸ್ಕೋಪ್ ಬಳಸಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.ಟೌನ್‌ಹಾಲ್ ಎದುರು ಆಹಾರ ಸೇವನೆ
ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ಗ್ರಹಣದ ಕುರಿತ ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ರಾತ್ರಿ 10.30 ಗಂಟೆಗೆ ಟೌನ್ ಹಾಲ್ ಬಳಿ ವಿಜ್ಞಾನದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ನಡೆಸಲಾಗುವುದು ಸೇರಿ ಆಹಾರ ಸೇವನೆ ಮಾಡಲಿದ್ದೇವೆ ಎಂದು ಟಿ.ನರಸಿಂಹಮೂರ್ತಿ ತಿಳಿಸಿದ್ದಾರೆ. ತಿಂಡಿ ತಿನಿಸು ಸೇವನೆ, ಗ್ರಹಣದ ಕುರಿತು ವೈಜ್ಞಾನಿಕ ಉಪನ್ಯಾಸ, ಕ್ರಾಂತಿಗೀತೆ ಹಾಡುವ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಅವರು ಹೇಳಿದರು.