ಸಾರಾಂಶ
ಖಗೋಳದ ಅಪರೂಪದ ಮತ್ತು ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ ಸೆ.7 ಮತ್ತು 8ರ ರಾತ್ರಿ ಜರುಗಲಿದ್ದು, ಚಂದಿರನು ರಕ್ತ ವರ್ಣ/ತಾಮ್ರ ವರ್ಣದಲ್ಲಿ ಗೋಚರಿಸಲಿದ್ದಾನೆ.
ಬೆಂಗಳೂರು : ಖಗೋಳದ ಅಪರೂಪದ ಮತ್ತು ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ ಸೆ.7 ಮತ್ತು 8ರ ರಾತ್ರಿ ಜರುಗಲಿದ್ದು, ಚಂದಿರನು ರಕ್ತ ವರ್ಣ/ತಾಮ್ರ ವರ್ಣದಲ್ಲಿ ಗೋಚರಿಸಲಿದ್ದಾನೆ.
ಈ ಅಪರೂಪದ ಖಗೋಳ ವಿಸ್ಮಯವು ಭಾರತದಲ್ಲಿ 5 ತಾಸು 27 ನಿಮಿಷಗಳ ಕಾಲ ಇರಲಿದೆ. ಅದರಲ್ಲಿ 1 ತಾಸು 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದೆ. ನಾಗರಿಕರು ತಮ್ಮ ಮನೆಗಳ ಮೇಲೆ ನಿಂತು ಬರಿಗಣ್ಣಿನಲ್ಲೇ ಕೆಂಪು ಶಶಿಯನ್ನು ವೀಕ್ಷಿಸಬಹುದಾಗಿದೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ, ವಿಜ್ಞಾನಿ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ಸೆ.7ರಂದು ರಾತ್ರಿ 8.58ಕ್ಕೆ ಚಂದ್ರಗ್ರಹಣ ಆರಂಭವಾಗಿ, 9.57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗುತ್ತದೆ. ಆದರೆ, ರಾತ್ರಿ 11ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲೇ ಕೆಂಪು ಚಂದಿರನನ್ನು ಕಾಣಬಹುದಾಗಿದೆ. ಭಾರತದ ಎಲ್ಲೆಡೆ ಈ ಗ್ರಹಣ ಕಾಣಿಸುತ್ತದೆ. ಜಗತ್ತಿನ ಜನಸಂಖ್ಯೆಯ ಶೇ.88ರಷ್ಟು ಜನರು ಈ ಗ್ರಹಣ ವೀಕ್ಷಿಸಬಹುದಾಗಿದೆ ಎಂದು ಗುರುಪ್ರಸಾದ್ ಮಾಹಿತಿ ನೀಡಿದರು.
ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ, ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ರಕ್ತ ವರ್ಣದ ಆಕಾಶಕಾಯವಾಗಿ ಗೋಚರಿಸುತ್ತದೆ. ಈಗ ಮಳೆಗಾಲವಿದ್ದು, ಮೋಡ ಬಂದರೆ ಗ್ರಹಣ ವೀಕ್ಷಣೆ ಕಷ್ಟವಾಗುತ್ತದೆ. ಟೆಲಿಸ್ಕೋಪ್ ಬಳಸಿದರೆ ಚಂದಿರನ ಮೇಲ್ಮೈ ಅನ್ನು ಇನ್ನಷ್ಟು ವಿವರವಾಗಿ ನೋಡಬಹುದು. ನೆಹರು ತಾರಾಲಯದಲ್ಲಿ ಈ ಕುರಿತು ಉಪನ್ಯಾಸ ಕಾರ್ಯಕ್ರಮ ಮತ್ತು ಟೆಲಿಸ್ಕೋಪ್ ಬಳಸಿ ವೀಕ್ಷಣೆಗೆ ವ್ಯವಸ್ಥೆ ಮಾಡುವ ಉದ್ದೇಶವಿದೆ. ರಾತ್ರಿ 11ರ ನಂತರ ಪ್ರಮುಖ ಘಟನಾವಳಿ ಜರುಗುವ ಕಾರಣ ಸಮಯದ ಮಿತಿ ಇರುತ್ತದೆ ಎಂದು ಗುರುಪ್ರಸಾದ್ ಹೇಳಿದರು.