ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಶತಮಾನದ ಧೂಮಕೇತುವೆಂದು ಕರೆಸಿಕೊಳ್ಳುತ್ತಿರುವ ತ್ಸುಸಿತ್ಸಾನ್ ಅಟ್ಲಾಸ್ ಸಿ/೨೦೨೩/ಎ ಧೂಮಕೇತು ಬರಿಗಣ್ಣಿಗೆ ಕಾಣುತ್ತಿರುವುದು ಆಕಾಶ ವೀಕ್ಷಕರಿಗೆ ಸಂಭ್ರಮದ ಸುದ್ದಿಯಾಗಿದೆ. ಅ.೧೫ರವರೆಗೆ ಪಶ್ಚಿಮ ದಿಕ್ಕಿನ ಸೂರ್ಯಸ್ತದ ನಂತರ ಕನ್ಯಾ ನಕ್ಷತ್ರಪುಂಜದ ನೇರದಲ್ಲಿ ಸುಮಾರು ೧೦ ಡಿಗ್ರಿ ಕೋನದಲ್ಲಿ ಕಾಣಿಸುತ್ತಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿಸ್ವಾಮಿ ತಿಳಿಸಿದ್ದಾರೆ.ಸುಮಾರು ೮೦೦೦೦ ವರ್ಷಗಳಿಗೊಮ್ಮೆ ಸೂರ್ಯನನ್ನು ಸುತ್ತು ಹಾಕುವ ಈ ಧೂಮಕೇತುವನ್ನು ಮತ್ತು ಅದರ ಬಾಲವನ್ನು ಎಲ್ಲರೂ ನೋಡಬಹುದಾಗಿದೆ. ಜೀವಮಾನದಲ್ಲೊಮ್ಮೆ ಮಾತ್ರ ಈ ಆಕಾಶದ ಅದ್ಭುತವನ್ನು ನೋಡಬಹುದು. ಎಲ್ಲರೂ ನೋಡಿ ಸಂಭ್ರಮಿಸಿ ಎಂದರು.
ಈ ಅಟ್ಲಾಸ್ ಧೂಮಕೇತು ಚೀನಾ ಹಾಗೂ ದಕ್ಷಿಣ ಆಫ್ರಿಕಾದ ವೀಕ್ಷಣಾಲಯಗಳಿಂದ ಕಂಡುಹಿಡಿಯಲ್ಪಟ್ಟಿದೆ. ಸೌರವ್ಯೂಹದ ಗ್ರಹಗಳ ಚಲನೆಗೆ ವಿರುದ್ಧವಾದ ದಿಕ್ಕಿನಲ್ಲಿ ಸೂರ್ಯನ ಸುತ್ತ ಬಂದು ಹೋಗುತ್ತದೆ. ಧೂಮಕೇತುವಿನ ಬಾಲವು ಸೂರ್ಯನ ಸಮೀಪ ಬಂದಾಗ ಲಕ್ಷಾಂತರ ಕಿಲೋ ಮೀಟರ್ ಎತ್ತರಕ್ಕೆ ಆಗಸದಲ್ಲಿ ಬೆಳೆಯುತ್ತದೆ. ದೀರ್ಘ ವೃತ್ತಾಕಾರದ ಪಥದಲ್ಲಿ ಸೂರ್ಯನ ಸುತ್ತ ಹಾದು ಹೋಗುವ ಈ ಧೂಮಕೇತುಗಳು ತಮ್ಮ ಪಥದಲ್ಲಿ ಅಪಾರ ಚೂರುಗಳನ್ನು ಬಿಟ್ಟು ಹೋಗುತ್ತವೆ. ಭೂಮಿಯು ಗುರುತ್ವದಿಂದ ಈ ತುಣುಕುಗಳನ್ನು ಸೆಳೆಯಲ್ಪಡುತ್ತವೆ. ಅವುಗಳೆ ಉಲ್ಕೆಗಳು ಮತ್ತು ಉಲ್ಕಾಪಾತ ಎಂದು ವಿವರಿಸಿದರು.ಅ.೧೫ರವರೆಗೆ ಸಂಜೆ ಆಗಸದಲ್ಲಿ ಅಟ್ಲಾಸ್ ಸಿ/೨೦೨೩/ಎ ಧೂಮಕೇತುವಿನ ಅದ್ಭುತ ದರ್ಶನವನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ. ಎಲ್ಲರೂ ನೋಡಿ ಆನಂದಿಸಿರಿ. ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ನೋಡಿ ಅಧ್ಯಯನ ಮಾಡಬಹುದು ಎಂದು ಹರೋನಹಳ್ಳಿ ಸ್ವಾಮಿ ತಿಳಿಸಿದರು. ಹೆಚ್ಚಿನ ಮಾಹಿತಿಗೆ ೭೮೯೨೧೫೪೬೯೫ ಸಂಪರ್ಕಿಸಬಹುದಾಗಿದೆ. ಧೂಮಕೇತುವಿನಲ್ಲಿ ಏನಿರುತ್ತದೆ?: ಧೂಮಕೇತುಗಳು ಸೌರವ್ಯೂಹದ ಅಂಚಿನಲ್ಲಿರುವ ಕ್ಯುಪರ್ ಪಟ್ಟಿ ಮತ್ತು ವೂರ್ಟ್ ಮೋಡಗಳಿಂದ ಅತಿಥಿಗಳಂತೆ ಆಗಮಿಸುತ್ತವೆ. ಧೂಮಕೇತು ಧೂಳು, ಕಲ್ಲು ಮತ್ತು ಮಂಜುಗಡ್ಡೆಗಳಿಂದ ಆವೃತವಾದ ದೊಡ್ಡ ಬಂಡೆ ಎನ್ನಬಹುದು. ಇವುಗಳಲ್ಲಿ ಹೈಡ್ರೋ ಕಾರ್ಬನ್‌ಗಳು ಇರುತ್ತವೆ. ಜೀವಿಗಳ ಉಗಮಕ್ಕೆ ಧೂಮಕೇತುಗಳು ಕೂಡ ಸಾಕ್ಷಿಯಾಗಿವೆ. ಜೀವಿಗಳ ಉಗಮಕ್ಕೆ ಅನೇಕ ಸಾಕ್ಷಿ ಗಳನ್ನು ಧೂಮಕೇತುಗಳು ನೀಡುತ್ತವೆ ಎಂದರು.