ಸಾರಾಂಶ
ವಿಜಯ ದಶಮಿಯ ಅಂಗವಾಗಿ ಮಲಂದೂರು ಬನ್ನಿಮಂಟಪದಲ್ಲಿ ದೇವರು ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಆನಂದಪುರ
ದೇವರ ಬನ್ನಿಯನ್ನು ಪಡೆದ ನಮ್ಮೆಲ್ಲರ ಬದುಕು ಬಂಗಾರವಾಗಿಸಿಕೊಳ್ಳೋಣ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್ ಹೇಳಿದರು.ಅವರು ವಿಜಯ ದಶಮಿಯ ಅಂಗವಾಗಿ ಮಲಂದೂರು ಬನ್ನಿಮಂಟಪದಲ್ಲಿ ಆಯೋಜಿಸಲಾಗಿದ್ದ ದೇವರು ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ಗ್ರಾಮೀಣ ಭಾಗದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ನವರಾತ್ರಿಯ 9 ದಿನಗಳ ಕಾಲ ದುರ್ಗಾದೇವಿಯ ವಿವಿಧ ಅವತಾರಗಳನ್ನು ಪೂಜಿಸಿದಂತಹ ನಾವು ವಿಜಯದಶಮಿಯ ದಿನದಂದು ಎಲ್ಲರೂ ಒಂದಾಗಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅರ್ಥಪೂರ್ಣ ಎಂದರು.
ಧರ್ಮ ರಕ್ಷ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜಾನಪದ ಕಲಾತಂಡಗಳೊಂದಿಗೆ ದೇವರ ಉತ್ಸವಗಳು ಮೆರವಣಿಗೆಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ವೈಭವದಿಂದ ಆಚರಿಸುವ ದೃಷ್ಟಿಯಲ್ಲಿ ಎಲ್ಲರೂ ಒಂದಾಗಿ ಶ್ರಮಿಸೋಣ ದೇವರ ಬನ್ನಿಯನ್ನು ಪಡೆದು ಎಲ್ಲರೂ ಬಂಗಾರದಂತೆ ಬಾಳೋಣ ಎಂದರು.ಬನ್ನಿಮಂಟಪಕ್ಕೆ ಸ್ಥಳೀಯ ಲಕ್ಷ್ಮಿ ರಂಗನಾಥ ಸ್ವಾಮಿ, ತುಳಜಾ ಭವಾನಿ, ರೇಣುಕಾದೇವಿ, ಬಾಲಸುಬ್ರಹ್ಮಣ್ಯ ಸ್ವಾಮಿ, ಶ್ರೀ ವೀರಾಂಜನೇಯ, ಎಲ್ಲಮ್ಮ ದೇವಿ, ಕೋಟೆ ಆಂಜನೇಯ ಸ್ವಾಮಿ, ಪಾಂಡುರಂಗ ಸ್ವಾಮಿ ಸೇರಿದಂತೆ ಎಲ್ಲಾ ದೇವರುಗಳ ಉತ್ಸವಗಳು ಬನ್ನಿ ಮಂಟಪಕ್ಕೆ ಆಗಮಿಸಿದ್ದವು. ಬನ್ನಿ ಮುಡಿಯುವ ಕಾರ್ಯಕ್ರಮದ ನಂತರ ದೇವರ ಉತ್ಸವಗಳು ರಾಜಭೀದಿಯ ಮೂಲಕ ದೇವಸ್ಥಾನಕ್ಕೆ ತೆರಳಿದ. ಬನ್ನಿಮಂಟಪಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.