ಇಂದು ದೇಶಾದ್ಯಂತ ಖಗ್ರಾಸ ಚಂದ್ರ ಗ್ರಹಣ - ರಾತ್ರಿ 9.57ಕ್ಕೆ ಆರಂಭ, ತಡರಾತ್ರಿ 1.26ಕ್ಕೆ ಮುಕ್ತಾಯ

| N/A | Published : Sep 07 2025, 06:26 AM IST

Blood moon total lunar eclipse 2025
ಇಂದು ದೇಶಾದ್ಯಂತ ಖಗ್ರಾಸ ಚಂದ್ರ ಗ್ರಹಣ - ರಾತ್ರಿ 9.57ಕ್ಕೆ ಆರಂಭ, ತಡರಾತ್ರಿ 1.26ಕ್ಕೆ ಮುಕ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಖಗೋಳದ ಅಪರೂಪದ ಮತ್ತು ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ ಸೆ.7ರ ರಾತ್ರಿ ಜರುಗಲಿದ್ದು, ಚಂದಿರನು ರಕ್ತ ವರ್ಣ/ತಾಮ್ರ ವರ್ಣದಲ್ಲಿ ಕಾಣಿಸಲಿದ್ದಾನೆ.

  ಬೆಂಗಳೂರು :  ಖಗೋಳದ ಅಪರೂಪದ ಮತ್ತು ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ ಸೆ.7ರ ರಾತ್ರಿ ಜರುಗಲಿದ್ದು, ಚಂದಿರನು ರಕ್ತ ವರ್ಣ/ತಾಮ್ರ ವರ್ಣದಲ್ಲಿ ಕಾಣಿಸಲಿದ್ದಾನೆ.

ಈ ಅಪರೂಪದ ಖಗೋಳ ವಿಸ್ಮಯ ಭಾರತದಲ್ಲಿ 5 ತಾಸು 27 ನಿಮಿಷಗಳ ಕಾಲ ಇರಲಿದೆ. ಅದರಲ್ಲಿ 1 ತಾಸು 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದೆ. ನಾಗರಿಕರು ತಮ್ಮ ಮನೆಗಳ ಮೇಲೆ ನಿಂತು ಬರಿಗಣ್ಣಿನಲ್ಲೇ ಕೆಂಪು ಶಶಿಯನ್ನು ವೀಕ್ಷಿಸಬಹುದಾಗಿದೆ ಎಂದು ಜವಾಹರ ಲಾಲ್ ನೆಹರು ತಾರಾಲಯದ ನಿರ್ದೇಶಕ, ವಿಜ್ಞಾನಿ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದರು.

ಸೆ.7ರಂದು ರಾತ್ರಿ 8.58ಕ್ಕೆ ಚಂದ್ರಗ್ರಹಣ ಆರಂಭವಾಗಿ, 9.57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗುತ್ತದೆ. ಆದರೆ, ರಾತ್ರಿ 11ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲೇ ಕೆಂಪು ಚಂದಿರನನ್ನು ಕಾಣಬಹುದಾಗಿದೆ. ಗ್ರಹಣ ತಡರಾತ್ರಿ 1.26ಕ್ಕೆ ಮುಕ್ತಾಯಗೊಳ್ಳಲಿದೆ. ಭಾರತದ ಎಲ್ಲೆಡೆ ಈ ಗ್ರಹಣ ಕಾಣಿಸುತ್ತದೆ. ಜಗತ್ತಿನ ಜನಸಂಖ್ಯೆಯ ಶೇ.88ರಷ್ಟು ಜನ ಈ ಗ್ರಹಣ ವೀಕ್ಷಿಸಬಹುದು ಎಂದು ಗುರುಪ್ರಸಾದ್ ಮಾಹಿತಿ ನೀಡಿದರು.

ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ, ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ರಕ್ತ ವರ್ಣದ ಆಕಾಶಕಾಯವಾಗಿ ಗೋಚರಿಸುತ್ತದೆ. ಈಗ ಮಳೆಗಾಲವಿದ್ದು, ಮೋಡ ಬಂದರೆ ಗ್ರಹಣ ವೀಕ್ಷಣೆ ಕಷ್ಟವಾಗುತ್ತದೆ. ಟೆಲಿಸ್ಕೋಪ್ ಬಳಸಿದರೆ ಚಂದಿರನ ಮೇಲ್ಮೈ ಅನ್ನು ಇನ್ನಷ್ಟು ವಿವರವಾಗಿ ನೋಡಬಹುದು ಎಂದು ಗುರುಪ್ರಸಾದ್ ಹೇಳಿದರು.

ನೆಹರು ತಾರಾಲಯದಲ್ಲಿ ಈ ಕುರಿತು ಉಪನ್ಯಾಸ ಕಾರ್ಯಕ್ರಮ ಮತ್ತು ಟೆಲಿಸ್ಕೋಪ್ ಬಳಸಿ ವೀಕ್ಷಣೆಗೆ ವ್ಯವಸ್ಥೆ ಮಾಡುವ ಉದ್ದೇಶವಿದೆ. ರಾತ್ರಿ 11ರ ನಂತರ ಪ್ರಮುಖ ಘಟನಾವಳಿ ಜರುಗುವ ಕಾರಣ ಸಮಯದ ಮಿತಿ ಇರುತ್ತದೆ ಎಂದು ಗುರುಪ್ರಸಾದ್ ಹೇಳಿದರು.

Read more Articles on