ಸಾರಾಂಶ
ಶಾಲೆಗಳ ಸ್ಥಿತಿಗತಿ ವರದಿ ನೀಡಲು ನಿರ್ಲಕ್ಷ್ಯವಹಿಸಿರುವ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿ ಕಾರಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ವ್ಯಾಪ್ತಿಯಲ್ಲಿ ಶಾಲೆಗಳ ಸ್ಥಿತಿಗತಿ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಲು ಬಿಬಿಎಂಪಿಗೆ ಕೊನೆಯದಾಗಿ ಎರಡು ವಾರ ಕಾಲಾವಕಾಶವನ್ನು ಹೈಕೋರ್ಟ್ ನೀಡಿದೆ.ರಾಜ್ಯದಲ್ಲಿ ಶಾಲೆಬಿಟ್ಟಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಹಾಗೂ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ನಗರದಲ್ಲಿ ಪಾಲಿಕೆಯ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿರುವ ಬಗ್ಗೆ ವಸ್ತುಸ್ಥಿತಿ ವರದಿ ನೀಡಲು ಸೂಚಿಸಿ 2023ರ ಅ.21ರಂದು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸಮೀಕ್ಷೆ ನಡೆದಿಲ್ಲ. ಬಿಬಿಎಂಪಿ ಶಾಲೆಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಇ-ಮೇಲ್ ಕಳುಹಿಸಿದ್ದರೂ ಮಾಹಿತಿ ನೀಡುತ್ತಿಲ್ಲ ಎಂದು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು ನ್ಯಾಯಪೀಠದ ಗಮನಕ್ಕೆ ತಂದರು.ಆಗ ಬಿಬಿಎಂಪಿ ಪರ ವಕೀಲರು, ಪಾಲಿಕೆಯ ಎಂಟೂ ವಲಯಗಳಲ್ಲಿರುವ ಶಾಲೆಗಳ ಸ್ಥಿತಿಗತಿ ಕುರಿತು ಸಮಗ್ರವಾದ ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೋರಿದರು.
ಅದರಿಂದ ಅತೃಪ್ತರಾದ ನ್ಯಾಯಮೂರ್ತಿ ದೀಕ್ಷಿತ್ ಅವರು, ಬಿಬಿಎಂಪಿ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯುತ್ತಾರೆಯೇ ವಿನಾ ಬೇರೆ ಶಾಲೆಗಳಲ್ಲಿ ಅಲ್ಲ. ಕೋರ್ಟ್ ಸೂಚನೆ ಹೊರತಾಗಿಯೂ ಬಿಬಿಎಂಪಿ ಮಾಹಿತಿ ಒದಗಿಸುವುದಿಲ್ಲ. ಬಿಡಿಎ, ಬಿಬಿಎಂಪಿ ಮತ್ತು ಕೆಐಡಿಬಿಯಲ್ಲಿ ಸಮಸ್ಯೆಗಳಿವೆ. ಅವುಗಳು ಕೆಟ್ಟ ದಾವೆದಾರು ಎಂಬುದಾಗಿ ಹೇಳದೆ ನಮಗೆ ವಿಧಿಯಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಅಂತಿಮವಾಗಿ ಬಿಬಿಎಂಪಿ ಪರ ವಕೀಲರ ಮನವಿ ಮೇರೆಗೆ, ಪ್ರಕರಣ ಸಂಬಂಧ ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವ ಕ್ರಮದ ವರದಿಯನ್ನು ಎರಡು ವಾರದಲ್ಲಿ ಸಲ್ಲಿಸಬೇಕು. ಇದು ಕೊನೆಯ ಅವಕಾಶ ಎಂದು ಹೇಳಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಿತು.
ರಸ್ತೆ ಒತ್ತುವರಿ ಮಾಡಿ ದೇಗುಲ: ಸಮಗ್ರ ವರದಿಗೆ ಸೂಚನೆಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಸುಂಕದಕಟ್ಟೆಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂಬ ಬಗ್ಗೆ ಹೊಸದಾಗಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚಿಸಿದೆ.ಸುಂಕದಕಟ್ಟೆಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರು ದೇವಸ್ಥಾನ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸಿ.ಹೊನ್ನಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ನ್ಯಾಯಪೀಠ ಸೂಚನೆ ನೀಡಿತು.ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ನ್ಯಾಯಾಲಯದ ಹಿಂದಿನ ಸೂಚನೆಯಂತೆ ನಗರ ಜಿಲ್ಲಾಧಿಕಾರಿಗಳು ನೇಮಿಸಿದ ಭೂ ದಾಖಲೆಗಳ ಉಪನಿರ್ದೇಶಕರು ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದೆ. ಆ ಕುರಿತಂತೆ ವಾಸ್ತವಿಕ ವರದಿಯನ್ನು ಮಾ.4ರಂದು ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದೇವಸ್ಥಾನದವರು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿರುವ ಅಂಶವನ್ನು ವರದಿಯಲ್ಲಿ ಎಲ್ಲಿ ಉಲ್ಲೇಖಿಸಲಾಗಿದೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಆಗ ಸರ್ಕಾರಿ ವಕೀಲರು, ನ್ಯಾಯಾಲಯ ಅನುಮತಿ ಕೊಟ್ಟರೆ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.ಅದನ್ನು ಪರಿಗಣಿಸಿದ ನ್ಯಾಯಪೀಠ, ಹೊಸದಾಗಿ ಸ್ಥಳ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಸ್ವತಂತ್ರವಾಗಿದೆ. ಸಮೀಕ್ಷೆ ನಡೆಸುವುದಕ್ಕು ಮುನ್ನ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಕೊಟ್ಟು ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಿ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿತು.