ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಜನ-ಜಾನುವಾರುಗಳಿಗೆ ಕುಡಿವ ನೀರಿಗಾಗಿ ಸ್ಥಳೀಯ ನಾಲೆಗಳ ಶೀಘ್ರ ನೀರು ಹರಿಸುವಂತೆ ಒತ್ತಾಯಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಬಾಯಿ ಬಡಿದುಕೊಂಡು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿಯ ಎದುರು ಮುಖಂಡ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರುಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಬೆಂಗಳೂರಿಗರಿಗೆ ಕುಡಿಯುವ ನೀರು ಕೊಡುವುದಾಗಿ ಸುಳ್ಳು ಹೇಳಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಕಾವೇರಿ ನದಿ ಪಾತ್ರದ ರೈತರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕರು ಜಿಲ್ಲೆಯ ಸಮಸ್ಯೆಗಳನ್ನು ಮುಖ್ಯ ಮಂತ್ರಿಗಳ ಬಳಿ ಹೇಳದೆ ಕೇವಲ ಅವರಿಗೆ ಬಹುಪರಾಕ್ ಎನ್ನುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯಕ್ಕೆ ಬರ ಬಂದಿದೆ. ರೈತರಿಗೆ ಬರ ಪರಿಹಾರ ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಮುಖ್ಯಮಂತ್ರಿ ಮತ್ತು ಉಪಮಖ್ಯಮಂತ್ರಿಗಳು ನಮ್ಮ ಕಾವೇರಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರು ಎನ್ನುವ ನೆಪದಲ್ಲಿ ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದು ಕಿಡಿಕಾರಿದರು.ರಾಜ್ಯದ ರೈತರು ಹಾಗೂ ಜನರಿಗೆ ವಿಷ ಕೊಟ್ಟು ಮರಣ ಶಾಸನ ಬರೆದ ಕಾಂಗ್ರೆಸ್ ಸರ್ಕಾರ ಕೆಟ್ಟ ವ್ಯವಸ್ಥೆಗೆ ದೂಡಿದೆ. ಅಣೆಕಟ್ಟೆ ವ್ಯಾಪ್ತಿಯ ಜನ-ಜಾನುವಾರುಗಳು ಸೇರಿದಂತೆ ರೈತರ ತೋಟಗಾರಿಕೆ ಬೆಳೆಗಳಾದ ತೆಂಗಿನ ಮರಗಳು ನೀರು ಇಲ್ಲದೆ ಜೊತೆಗೆ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಅಣೆಕಟ್ಟೆಯಿಂದ ಕದ್ದುಮುಚ್ಚಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದನ್ನು ಪ್ರಶ್ನಿಸಿದ ರೈತರನ್ನು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಬೇಕಾಬಿಟ್ಟಿ ಮಾತನಾಡುತ್ತಾರೆ. ಅವರಿಗೆ ಮರ್‍ಯಾದೆ ಇದೆಯಾ ಎಂದು ಕಿಡಿಕಾರಿದರು.ಬೆಂಗಳೂರಿಗೆ ನೀರು ಕೊಡಲು ನಮಗೆ ಬೇಸರವಿಲ್ಲ. ಆದರೆ, ಅವರಿಗೂ ಕೊಟ್ಟಂತೆ ನಮ್ಮ ರೈತರಿಗೂ ನೀರು ಹರಿಸಬಹುದು. ಕಾವೇರಿ ಸಮಸ್ಯೆ ಬಂದಾಗ ಹೋರಾಟ ಮಾಡುವುದು ಮಂಡ್ಯ ಜಿಲ್ಲೆಯ ರೈತರು. ಆದರೆ, ಹೆಚ್ಚು ನೀರಿನ ಉಪಯೋಗ ಪಡೆಯುತ್ತಿರುವುದು ಬೆಂಗಳೂರು ಮತ್ತು ಮೈಸೂರು ಜಿಲ್ಲೆಯ ಜನರು. ಆ ಜಿಲ್ಲೆ ಜನರು ಸಹ ನೀರಿನ ಸಮಸ್ಯೆ ತಿಳಿದುಕೊಂಡು ತಮಿಳುನಾಡಿನ ವಿರುದ್ಧ ಹೋರಾಟದಲ್ಲಿ ಭಾಗವಹಿಸಲಿ ಎಂದು ಆಗ್ರಹಿಸಿದರು.
ನಂತರ ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಿದ ಪ್ರತಿಭಟನಾಕಾರರು, ರೈತರ ಸಮಸ್ಯೆ ಮತ್ತು ಪ್ರತಿಭಟನೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ, ರವಿಲಕ್ಷಣ, ಸುರೇಶ್, ಕೃಷ್ಣ, ಚಾಮರಾಜು, ಕೆಂಪಣ್ಣ ಸೇರಿದಂತೆ ಇತರರು ಇದ್ದರು.