ದಾಬಸ್‍ಪೇಟೆ: ಖಾಸಗಿ ಜಮೀನಿಗೆ ಬಿಬಿಎಂಪಿ ಕಸ ಸುರಿಯಲು ಬಂದಿದ್ದ ಲಾರಿಗಳನ್ನು ಗ್ರಾಮಸ್ಥರು ತಡೆದು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಿಇಒ ಕರಿಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಾಬಸ್‍ಪೇಟೆ: ಖಾಸಗಿ ಜಮೀನಿಗೆ ಬಿಬಿಎಂಪಿ ಕಸ ಸುರಿಯಲು ಬಂದಿದ್ದ ಲಾರಿಗಳನ್ನು ಗ್ರಾಮಸ್ಥರು ತಡೆದು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಿಇಒ ಕರಿಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೊರೆಕೆಂಪಹಳ್ಳಿ ಸಮೀಪದ ಹೊನ್ನಗೌಡನಪಾಳ್ಯದ ಉಮೇಶ್ ಖಾಸಗಿ ಜಮೀನಿಗೆ ಬಿಬಿಎಂಪಿಯ ಕಸ ಸುರಿಯಲು 40ಕ್ಕೂ ಹೆಚ್ಚು ಲಾರಿಗಳು ಆಗಮಿಸಿದ್ದು, 25 ಲಾರಿಗಳ ಕಸವನ್ನು ತಮ್ಮ ಜಮೀನಿನಲ್ಲಿ ಸುರಿಸಿದ್ದಾರೆ. ಅಕ್ಕಪಕ್ಕದ ಜಮೀನು ಹಾಗೂ ಗ್ರಾಮಸ್ಥರು ಬಿಬಿಎಂಪಿ ವಾಹನಗಳು ಕಸ ಸುರಿಯುವುದನ್ನು ಗಮನಿಸಿ ವಾಹನಗಳನ್ನು ರಸ್ತೆಯಲ್ಲೇ ತಡೆದು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.

ಕೆಲ ಚಾಲಕರು ಹಾಗೂ ಅಧಿಕಾರಿಗಳು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಿಇಒ ಕರಿಗೌಡ ಮೌಖಿಕವಾಗಿ ಹೇಳಿದ್ದಾರೆ. ಆದ್ದರಿಂದ ಸುರಿಯಲು ಬಂದಿದ್ದೇವೆ. ಆದೇಶ ಕಾಪಿ ಇಲ್ಲ, ಅವರ ಬಳಿಯೇ ಮಾತನಾಡಿ ಎಂದು ಹೇಳಿದಾಗ ಕರಿಗೌಡರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಖಾಸಗಿ ಜಮೀನು ಮಾಲೀಕರಿಗೆ ತರಾಟೆಗೆ ತೆಗೆದುಕೊಂಡರು.

ಪೊಲೀಸರ ವಶಕ್ಕೆ: ಖಾಸಗಿ ಜಮೀನಿಗೆ ಮೂರು ದಿನಗಳ ಕಾಲ 150 ಲಾರಿ ಕಸ ಸುರಿಯಲು ಅಧಿಕಾರಿಗಳು ಸೂಚನೆ ನೀಡಿದ್ದರೆಂದು ತಿಳಿದು ಬಂದಿದ್ದು, ಮೊದಲ ದಿನ 40 ಲಾರಿ ಬಂದಿದ್ದು, ಅದರಲ್ಲಿ 25 ಲಾರಿಗಳಲ್ಲಿನ ಕಸ ಸುರಿದಿದ್ದರೆ, ಉಳಿದ 15 ಲಾರಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಲಧಿಕಾರಿಗಳಿಂದ ಲಾರಿಗಳನ್ನು ಬಿಡುವಂತೆ ಒತ್ತಡ ಬಂದರೂ, ಪೊಲೀಸರು ವಶಕ್ಕೆ ಪಡೆಯುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.

ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಆಗಮಿಸಿ, ಅಕ್ರಮವಾಗಿ ಬಿಬಿಎಂಪಿ ಕಸ ಸುರಿಸಿದ ಜಮೀನ ಮಾಲೀಕನ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

ಪೋಟೋ4 : ತೊರೆಕೆಂಪಹಳ್ಳಿ ಸಮೀಪದ ಖಾಸಗಿ ಜಮೀನಿನಲ್ಲಿ ಕಸ ಸುರಿಯಲು ಬಂದಿರುವ ಬಿಬಿಎಂಪಿ ಲಾರಿಗಳು.

ಪೋಟೋ 5 : ಕಸ ಸುರಿದಿರುವುದು