ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಪಂಗೆ ರಾಜ್ಯ ಸರ್ಕಾರದಿಂದ 2024-25ನೇ ಸಾಲಿನಲ್ಲಿ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದ್ದು, ಸ್ಮರಣಿಕೆ ಮತ್ತು ರು. 5 ಲಕ್ಷ ಬಹುಮಾನ ಲಭಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ತಾಲೂಕಿನ ದೊಡ್ಡಮಾರಗೌಡನಹಳ್ಳಿ (ಡಿಎಂಜಿಹಳ್ಳಿ) ಗ್ರಾಪಂಗೆ ರಾಜ್ಯ ಸರ್ಕಾರದಿಂದ 2024-25ನೇ ಸಾಲಿನಲ್ಲಿ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದ್ದು, ಸ್ಮರಣಿಕೆ ಮತ್ತು ರು. 5 ಲಕ್ಷ ಬಹುಮಾನ ಲಭಿಸಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಕಂಚಿನಕೆರೆ ರುಕ್ಮಾಂಗದ ಹೇಳಿದರು.

ಈ ಹಿಂದೆಯೂ ನಮ್ಮ ಗ್ರಾಪಂಗೆ 2013-14ರಲ್ಲಿಯೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿತ್ತು. ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ 6 ಕಂದಾಯ ಗ್ರಾಮಗಳು, 4 ಜನವಸತಿ ಪ್ರದೇಶ ಒಳಗೊಂಡ ಸುಮಾರು 11 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಗ್ರಾಪಂ ವ್ಯಾಪ್ತಿಯಲ್ಲಿ 12 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಿಗೆ 75 ಸಾವಿರ ರು. ಮಿತಿಯಲ್ಲಿ ಮಕ್ಕಳು ಕುಳಿತುಕೊಳ್ಳಲು ಕುರ್ಚಿ ಮತ್ತು ಪೀಠೋಪಕರಣ ಒದಗಿಸಲಾಗಿದೆ. 5 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಗ್ರಾಪಂನ ಅರಿವು ಕೇಂದ್ರದಲ್ಲಿ ಒಟ್ಟು 750 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

450 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪುಸ್ತಕಗಳು, 4 ಕಂಪ್ಯೂಟರ್ ಹಾಗೂ ವಾಚನಾಲಯ ಹೊಂದಿದ್ದು, ಪ್ರತಿನಿತ್ಯ 35 ರಿಂದ 60 ಪದವಿ ವಿದ್ಯಾರ್ಥಿಗಳು, ಗ್ರಾಮಸ್ಥರು ಅರಿವು ಕೇಂದ್ರ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಅಭಿನಂದಿಸುತ್ತಿದ್ದೇವೆ. ಗ್ರಾಪಂ ವ್ಯಾಪ್ತಿಯಲ್ಲಿ 14 ಓವರ್‌ ಹೆಡ್ ಟ್ಯಾಂಕ್‌ ಗಳಿದ್ದು, 5 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 12 ಹೈಮಾಸ್ಕ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಎಲ್ಲ ಗ್ರಾಮಗಳ ಚರಂಡಿ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಪ್ರತಿನಿತ್ಯ ನಿರ್ವಹಿಸಲಾಗುತ್ತಿದೆ. ಪ್ರತಿವರ್ಷ ವಿಶೇಷಚೇತನರಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ನಮ್ಮ ಆಯುಷ್ಮಾನ್ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಪ್ರತಿನಿತ್ಯ 40 ರಿಂದ 75 ಜನರು ಪ್ರಯೋಜನಾ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

2ನೇ ಬಾರಿಗೆ ನಮ್ಮ ಪಂಚಾಯ್ತಿಗೆ ಬಂದ ಗಾಂಧಿ ಗ್ರಾಮ ಪುರಸ್ಕಾರವನ್ನು ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರಿಂದ ಅಧ್ಯಕ್ಷೆ ಚಿಕ್ಕಮ್ಮ ಹಾಗೂ ನಾನು ಸ್ವೀಕರಿಸಿದ್ದೇವೆ. ಇದು ನಮಗೆ ಸಂತೋಷ ತಂದಿದೆ ಜೊತೆಗೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರ ಸಹಕಾರ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಸಹಾಯಕವಾಗಿದೆ ಎಂದರು.