ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಕ್ರಿ.ಶ.೧೨೦೭ರ ಅವಧಿಯ ವೀರಗಲ್ಲನ್ನು ಇತಿಹಾಸ ಅಧ್ಯಯನಕಾರ ಉಳವಿಯ ಅವಿನಾಶ್ ಚಕ್ರಸಾಲಿ ಪತ್ತೆ ಮಾಡಿದ್ದಾರೆ.

ವೀರಗಲ್ಲು ೯ ಅಡಿ ಉದ್ದ, ೩ ಅಡಿ ಅಗಲವಿದ್ದು ಮೂರು ಹಂತಗಳಲ್ಲಿ ಚಿತ್ರಿಸಲಾಗಿದೆ. ಕೆಳಗಿನ ಹಂತದಲ್ಲಿ ವೀರನು ಬಿಲ್ಲು-ಬಾಣ ಆಯುಧಗಳನ್ನು ಹಿಡಿದು ವೈರಿಯೊಂದಿಗೆ ಹೋರಾಡುತ್ತಿರುವ ಚಿತ್ರಣವಿದ್ದು, ಮಧ್ಯದಲ್ಲಿ ಕಾಳಗದಲ್ಲಿ ವೀರಮರಣ ಹೊಂದಿದ ವೀರನನ್ನು ಸುರಾಂಗನೆಯರು ದೇವಲೋಕಕ್ಕೆ ಕೊಂಡೊಯ್ಯುವ ಚಿತ್ರಣವಿದೆ. ಮೇಲಿನ ಹಂತದಲ್ಲಿ ದೇವಲೋಕದ ಸಂಕೇತವಾಗಿ ಶಿವಲಿಂಗ, ನಂದಿ ಹಾಗೂ ಪದ್ಮಾಸನದಲ್ಲಿ ಕೈಮುಗಿದು ಪ್ರಾರ್ಥಿಸುತ್ತಿರುವ ವೀರನನ್ನು ಕಾಣಬಹುದು.

ಇದರಲ್ಲಿ ೧೪ ಸಾಲಿನ ಶಾಸನ ಪಾಠವನ್ನು ಎರಡು ಪಟ್ಟಿಕೆಗಳಲ್ಲಿ ಬರೆಯಲಾಗಿದೆ. ಚಾಲುಕ್ಯ ಅರಸನಾದ ಜಗದೇಕಮಲ್ಲನ ಆಡಳಿತವನ್ನು ಉಲ್ಲೇಖಿಸಿದ್ದು ಅದರಲ್ಲಿ ಜಗದೇಕಮಲ್ಲನನ್ನು ಶಾಸನವು ಪ್ರಥವಿ ವಲ್ಲಭಮಹಾ ರಾಜಾಧಿರಾಜ ಪರಮೇಶ್ವರಂ ಪರಮ ಭಟಾರಕ ಸತ್ಯಾಶ್ರಯ ಕುಳತಿಳಕ ಚಾಲುಕ್ಯಾಭರಣ ಎಂಬ ಬಿರುದುಗಳನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಬನವಾಸಿ ಹನ್ನೆರಡು ಸಾವಿರ ರಾಜ್ಯವನ್ನು ಹಾನಗಲ್ಲಿನ ಕದಂಬ ಚಕ್ರೇಶ್ವರ ಕೀರ್ತಿ ದೇವನ ಕುಮಾರ ಹೆಮ್ಮಾಡಿ ದೇವನು ಆಳುತ್ತಿರುತ್ತಾನೆ. ಈ ಅವಧಿಯಲ್ಲಿ ಬನವಾಸಿ ನಾಡಿನ ಮನ್ನೇಯ ಮಾಂಡಳೀಕನ ಅನುಮತಿ ಪಡೆದು ಕಾನಹಳ್ಳಿಯ ಹಡವಳ ಕನ್ನಯ್ಯನು ಒಂದು ಕಾಳಗದಲ್ಲಿ ತಾನೇ ನೇರವಾಗಿ ಹೋರಾಟಕ್ಕೆ ದುಮುಕುತ್ತಾನೆ. ಹೋರಾಟದಲ್ಲಿ ವಿರೋಧಿಗಳ ಕುದುರೆಗಳನ್ನು ಹಲವು ಸೈನಿಕರನ್ನು ಕೊಂದು ವೀರಭಟನಾಗಿ ಸ್ವರ್ಗ ಪಡೆಯುತ್ತಾನೆ. ಶಾಸನದ ೧೦ನೇ ಸಾಲಿನ ಹಲವು ಅಕ್ಷರಗಳು ಅಳಿಸಿಹೋಗಿರುವುದರಿಂದ ಕನ್ನಯ್ಯನು ಯಾರೊಂದಿಗೆ ಕಾಳಗ ಮಾಡಿದ ಎಂಬ ಮಾಹಿತಿ ದೊರೆಯುತ್ತಿಲ್ಲ. ಆತನ ಕುಟುಂಬಕ್ಕೆ ಹೆಮ್ಮಾಡಿದೇವನು ಕಾನಹಳ್ಳಿಯ ನಾಯಕ ವೃತ್ತಿಯನ್ನು ಮರು ನೀಡುತ್ತಾನೆ. ಈ ವೀರಗಲ್ಲನ್ನು ಬೀರಯ್ಯ ಎಂಬವವನು ರಚಿಸಿದ್ದಾನೆ.

ಸೊರಬ ತಾಲೂಕಿನಲ್ಲಿ ಹೆಮ್ಮಾಡಿದೇವನ ಉಲ್ಲೇಖ ಇದೇ ಮೊದಲನೆಯದ್ದಾಗಿದೆ. ಕನ್ನಯ್ಯ ಎಂಬ ಕಾನಹಳ್ಳಿಯ ನಾಯಕನು ನೇರವಾಗಿ ಕಾಳಗಕ್ಕೆ ಇಳಿದಿದ್ದು ಇದು ಅಂದಿನ ವೀರತ್ವದ ಸಂಕೇತವಾಗಿದೆ. ಕಾನಹಳ್ಳಿ ಆ ವೇಳೆಗಾಗಲೇ ಅವರಿಬ್ಬರ ಆಡಳಿತಗಾರರನ್ನು ಹೊಂದಿತ್ತು ಎಂಬುದು ಈ ಶಾಸನದಿಂದ ತಿಳಿದು ಬರುತ್ತದೆ.


ಈ ವೀರಗಲ್ಲು ದೊರೆತ ಸ್ಥಳದಿಂದ ೮೦೦ ಮೀ. ದೂರದಲ್ಲಿ ಐದನೇ ಶತಮಾನಕ್ಕೆ ಸೇರಿದ ಸಿಂಹಶಿಲ್ಪ ಪತ್ತೆಯಾಗಿದೆ. ಇದು ೬೫ ಸೆಂ.ಮೀ. ಉದ್ದ ೧೨ ಸೆಂಮೀ ಎತ್ತರವಿದ್ದು ಮುಂಭಾಗದ ಒಂದು ಭಾಗ ಒಡೆದು ಹೋಗಿದೆ.

ಈ ಕ್ಷೇತ್ರಕಾರ್ಯಕ್ಕೆ ಇತಿಹಾಸ ಸಂಶೋಧಕ ರಮೇಶ್ ಬಿ. ಹಿರೇಜಂಬೂರು ಸ್ಥಳಕ್ಕೆ ಬೇಟಿ ನೀಡಿ ಮಾರ್ಗದರ್ಶನ ಮಾಡಿದ್ದು, ಶಾಸನ ವಿಶ್ಲೇಷಣೆ ಮಾಡಿದ್ದಾರೆ. ಪರಿಸರ ಅಧ್ಯಯನಕಾರರಾದ ಜಿ. ಅರುಣಕುಮಾರ್, ಗ್ರಾಮಸ್ಥರಾದ ನೆಮ್ಮದಿ ಸಂತೋಷ್, ಸೋಮಶೇಖರ, ಸೋಮಪ್ಪ, ಟೋಕಪ್ಪ ಶಾಸನ ಪತ್ತೆ ಹಚ್ಚಲು ಸಹಕರಿಸಿದ್ದಾರೆ.