ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಾಡಿನ ಜನರ ಕಲ್ಯಾಣಕ್ಕಾಗಿ ತಮ್ಮ ಇಡೀ ಬದುಕನ್ನು ಸಮರ್ಪಿಸಿದ ಕೀರ್ತಿ ಮೈಸೂರು ಮಹಾರಾಜರದ್ದು. ಮೈಸೂರು ಸಂಸ್ಥಾನದ 22ನೇ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂದು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ತಾಂತ್ರಿಕ ಸಲಹೆಯಂತೆ 1907ರಲ್ಲಿ ಮೀರಸಾಬಿಹಳ್ಳಿ ಗ್ರಾಮದ ರಾಣೀಕೆರೆಯನ್ನು ನಿರ್ಮಿಸಿ ಈ ಭಾಗದ 30ಕ್ಕೂ ಹೆಚ್ಚು ಹಳ್ಳಿಯ ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಮಹರಾಜರ ಕಾರ್ಯ ರೈತರ ಪಾಲಿಗೆ ವರವಾಗಿದೆ ಇದರ ಸಂರಕ್ಷಣೆಗಾಗಿ ರಾಣೀಕೆರೆ ಪೂರಕನಾಲೆ ಹೋರಾಟಗಾರರ ಒಕ್ಕೂಟ ಅಸ್ಥಿತ್ವಕ್ಕೆ ಬಂದಿದ್ದು, ಒಕ್ಕೂಟದ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಭರವಸೆಯನ್ನು ಶಾಸಕ ಟಿ.ರಘುಮೂರ್ತಿ ನೀಡಿದರು.ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ರಾಣೀಕೆರೆ ಪ್ರದೇಶದಲ್ಲಿ ರಾಣಿಕೆರೆ ಪೂರಕ ನಾಲೆ ಹೋರಾಟಗಾರರ ಒಕ್ಕೂಟದ ನೂತನ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹಲವಾರು ಕೆರೆಗಳಿದ್ದರೂ ಸಹ ರಾಣೀಕೆರೆಗೆ ತನ್ನದೇಯಾದ ಇತಿಹಾಸವಿದೆ. ವಿಶೇಷವೆಂದರೆ ಕಳೆದ ಹತ್ತಾರು ವರ್ಷಗಳ ಹಿಂದೆ ಮಾಜಿಪ್ರಧಾನಿ ರಾಜೀವಗಾಂಧಿಯವರು ಇಲ್ಲಿಗೆ ಭೇಟಿ ನೀಡಿದ್ದನ್ನು ನೆನೆಪಿಸಿದರು. ಗ್ರಾಮದ ಜನರು ಕೆರೆ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚುಗಮನಹರಿಸುವಂತೆ ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಸಿ.ಶಿವಲಿಂಗಪ್ಪ, ರಾಣಿಕೆರೆ ಈ ಭಾಗದ ಜನರ ಜೀವನಾಡಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಪತ್ನಿ ಕೆಂಪ ನಂಜಮ್ಮಣ್ಣಿ ಹೆಸರಿನಲ್ಲಿ ಕೆರೆ ನಿರ್ಮಿಸಿದ್ದಾರೆ. ಈ ಕೆರೆ ಕೃಷಿ ಫಲಧಾರೆಯಾಗಿದೆ. ಇಂದು ಪೂರಕ ನಾಲೆ ಹೋರಾಟಗಾರರ ಸಂಘ ಆರಂಭವಾಗಿದ್ದು, ಕೆರೆಯ ಸಂರಕ್ಷಣಾ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ಹೊತ್ತುಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ವಿ.ಆರ್.ಸಿದ್ದೇಶ್ವರ, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಈ ಭಾಗದ ಜನರ ಹಾಗೂ ರೈತರ ಹಿತದೃಷ್ಠಿಯಿಂದ ಗುರು, ಹಿರಿಯರ ಸಹಕಾರ ಪಡೆದು ರಾಣೀಕೆರೆ ಪೂರಕನಾಲೆ ಹೋರಾಟಗಾರರ ಒಕ್ಕೂಟ ಅಸ್ಥಿತ್ವಕ್ಕೆ ತರಲಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಈ ಕೆರೆ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸಿದ್ಧಪಡಿಸಲಾಗುವುದು. ಶಾಸಕರು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಜಿಲ್ಲಾ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಂ.ಕರಿಯಪ್ಪ, ನಾರಾಯಣರೆಡ್ಡಿ, ಸುದರ್ಶನ ರೆಡ್ಡಿ, ಹನುಮಂತರಾಯಪ್ಪ, ಮಹಂತೇಶ್, ಆದಿಮೂರ್ತಿ, ಬಿ.ಗೋವಿಂದಪ್ಪ, ಲಕ್ಷ್ಮಿಪತಿ, ನಗರಸಭೆ ಮಾಜಿ ಸದಸ್ಯ ಕೆ.ವೀರಭದ್ರಪ್ಪ ಮುಂತಾದವರು ಭಾಗವಹಿಸಿದ್ದರು.