ತಿನ್ನುವ ಆಹಾರದ ಬಗ್ಗೆ ಎಚ್ಚರವಿರಲಿ

| Published : Aug 26 2024, 01:33 AM IST

ಸಾರಾಂಶ

ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಆರೋಗ್ಯ ಸ್ನೇಹಿ ಖಾದ್ಯವನ್ನು ಹೆಚ್ಚು ನೀಡಬೇಕು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣನ್ನು ಹೆಚ್ಚು ಸೇವಿಸಲು ಮಕ್ಕಳು ಹಾಗೂ ಪೋಷಕರು ಮುಂದಾಗಬೇಕು. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸಹ ಸೇವಿಸಲು ಪ್ರತಿಯೋರ್ವರು ಮುಂದಾಗಬೇಕು. ಆಹಾರ ಪದ್ಧತಿಯಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಪದ್ಧತಿಯೆಂದು ವಿಭಜನೆಗೊಂಡಿದ್ದು ಮಾಂಸಹಾರಿಗಳು ಸಹ ಮಾಂಸದ ಆಹಾರ ಸೇವನೆ ಮಾಡುವಾಗ ಗುಣಮಟ್ಟದ ಮಾಂಸದಿಂದ ಮಾಡಿರುವ ಆಹಾರವನ್ನು ಸೇವಿಸಬೇಕು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಸೇವಿಸುವ ಆಹಾರದ ಕುರಿತು ಪ್ರತಿಯೊಬ್ಬರು ಜಾಗೃತಿ ಹೊಂದಬೇಕೆಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಮಂಜುನಾಥ್ ಹೇಳಿದರು.

ತಾಲೂಕಿನ ಬಾಗೆ ಗ್ರಾಮದಲ್ಲಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಆಹಾರ ಮೇಳವನ್ನು ಉದ್ಘಾಟಿಸಿದ ನಂತರ ಮಾತನಾಡಿ, ಉತ್ತಮ ಆಹಾರ ಸೇವನೆಯಿಂದ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಇಂದಿನ ದಿನಗಳಲ್ಲಿ ಮಕ್ಕಳು ಜಂಕ್‌ಫುಡ್ ಹೆಚ್ಚು ಸೇವಿಸುತ್ತಿರುವುದು ಆತಂಕಕಾರಿಯಾಗಿದೆ. ನ್ಯೂಡಲ್ಸ್, ಪಿಜ್ಜಾದಂತಹ ಆಹಾರಗಳನ್ನು ಅಪರೂಪಕ್ಕೆ ತಿಂದರೆ ತೊಂದರೆಯಿಲ್ಲ. ಆದರೆ ಇಂತಹ ಜಂಕ್‌ಫುಡ್‌ನ್ನು ನಿಯಮಿತವಾಗಿ ತಿಂದರೆ ವಿವಿಧ ತೊಂದರೆಗಳಿಗೆ ತುತ್ತಾಗಬೇಕಾಗುತ್ತದೆ.

ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಆರೋಗ್ಯ ಸ್ನೇಹಿ ಖಾದ್ಯವನ್ನು ಹೆಚ್ಚು ನೀಡಬೇಕು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣನ್ನು ಹೆಚ್ಚು ಸೇವಿಸಲು ಮಕ್ಕಳು ಹಾಗೂ ಪೋಷಕರು ಮುಂದಾಗಬೇಕು. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸಹ ಸೇವಿಸಲು ಪ್ರತಿಯೋರ್ವರು ಮುಂದಾಗಬೇಕು. ಆಹಾರ ಪದ್ಧತಿಯಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಪದ್ಧತಿಯೆಂದು ವಿಭಜನೆಗೊಂಡಿದ್ದು ಮಾಂಸಹಾರಿಗಳು ಸಹ ಮಾಂಸದ ಆಹಾರ ಸೇವನೆ ಮಾಡುವಾಗ ಗುಣಮಟ್ಟದ ಮಾಂಸದಿಂದ ಮಾಡಿರುವ ಆಹಾರವನ್ನು ಸೇವಿಸಬೇಕು ಎಂದರು.

ಬಾಗೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಹಾರ ಮೇಳ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ವೈವಿಧ್ಯತೆಯ ಆಹಾರಗಳನ್ನು ತಯಾರು ಮಾಡುವ ಅರಿವು ಮಾತ್ರವಲ್ಲ, ಯಾವ ರೀತಿ ಆಹಾರಗಳನ್ನು ಮಾರಾಟ ಮಾಡುವುದು ಎಂಬ ಅರಿವು ಸಹ ದೊರಕುತ್ತದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ವಿವಿಧ ರೀತಿಯ ಆಹಾರಗಳನ್ನು ಮಾಡಿ ಮಾರಾಟ ಮಾಡಿದ್ದು ಕಂಡುಬಂದಿತು. ಪೋಷಕರು ಆಹಾರ ಪದಾರ್ಥಗಳನ್ನು ಖರೀದಿ ಮಾಡಲು ಎಲ್ಲಾ ಮಳಿಗೆಗಳಿಗೆ ಹೋಗಿ ವೀಕ್ಷಣೆ ಮಾಡುವುದು ಕಂಡುಬರುತ್ತಿತ್ತು.

ಈ ಸಂದರ್ಭದಲ್ಲಿ ಬಾಗೆ ಜೆಎಸ್‌ಎಸ್ ಶಾಲೆಯ ಪ್ರಾಂಶುಪಾಲ ಮಧುಕುಮಾರ್, ಚಿತ್ರಕಲಾ ಶಿಕ್ಷಕ ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.