ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ನಮ್ಮ ದೇಶದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳೂ ವಿಶಿಷ್ಟವಾಗಿದ್ದು, ಒಂದು ಹಬ್ಬದಂತೆ ಮತ್ತೊಂದು ಹಬ್ಬ ಇರುವುದಿಲ್ಲ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಲೀಲಾಜಿ ನುಡಿದರು.ನಗರದ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯರ ಒಂದೊಂದು ಹಬ್ಬಕ್ಕೂ ಅದರದೇ ಆದ ಮಹತ್ವವಿದೆ. ಅದನ್ನು ಅರಿತು ಪಾಲಿಸಿದಾಗ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಹಬ್ಬಗಳು ಅರ್ಥವಾದರೆ ಪ್ರಯೋಜನ:ಭಾರತದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳು ವಿಶಿಷ್ಟವಾಗಿವೆ. ಒಂದು ಹಬ್ಬದಂತೆ ಇನ್ನೊಂದು ಹಬ್ಬದ ಆಚರಣೆ ಇರುವುದಿಲ್ಲ. ನಮ್ಮ ಹಿರಿಯರು ನಿರ್ದಿಷ್ಟ ಉದ್ದೇಶದಿಂದ ಹಬ್ಬಗಳ ಆಚರಣೆ ಜಾರಿಗೆ ತಂದಿದ್ದಾರೆ. ಅವುಗಳ ಅರ್ಥ ಗೊತ್ತಿಲ್ಲದೇ ಆಚರಿಸುವುದರಿಂದ ಹಬ್ಬಗಳ ಮಹತ್ವ ಗೊತ್ತಾಗುವುದಿಲ್ಲ. ಹಬ್ಬದ ಸಂದೇಶ, ಸಾರ್ಥಕತೆ ಅರಿತು ಆಚರಿಸಿದಾಗ ಅವುಗಳಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಹೇಳಿದರು.
ಶ್ರೀಕೃಷ್ಣ ಎಲ್ಲರಿಗೂ ಪ್ರಿಯವಾದ ವ್ಯಕ್ತಿತ್ವ. ಆದರೆ, ನಮ್ಮದೇ ಆದರ್ಶ ಪಾತ್ರಕ್ಕೆ ವಿಚಿತ್ರ ಕಥೆಗಳನ್ನು ಕಟ್ಟಿ ಕಳಂಕ ಹೊರಿಸಿರುವುದು ವಿಷಾದನೀಯ. ಧರ್ಮಗ್ಲಾನಿಯಾದಾಗ ಕೃಷ್ಣ ಪರಮಾತ್ಮ ಅವತರಿಸಿ, ಗೀತಾ ಜ್ಞಾನ ಕೊಟ್ಟರು. ದೇಹಾಭಿಮಾನ, ಅಹಂಕಾರದ ವಸ್ತ್ರ ಕಳಚಿ, ಆತ್ಮಾಭಿಮಾನ ಬೆಳೆಸಿಕೊಳ್ಳುವುದನ್ನು ಕಲಿಸಿದರು. ಕಾಳಿಂಗಮರ್ಧನ ಮೂಲಕ ಪಂಚವಿಕಾರಗಳ ಮೇಲೆ ಜಯ ಸಾಧಿಸುವ ಸಂದೇಶ ನೀಡಿದರು. ಸದ್ಗುಣಗಳನ್ನು ಅಳವಡಿಸಿಕೊಂಡವರೇ ಪಾಂಡವರು. ಜಗತ್ತಿನಲ್ಲಿ ದುಷ್ಟಗುಣಗಳ ಸಂಖ್ಯೆ ಯಾವಾಗಲೂ ಹೆಚ್ಚಾಗಿರುತ್ತದೆ. ಒಳಿತು-ಕೆಡುಕಿನ ನಡುವೆ ಸದಾ ನಡೆಯುವ ಮಾನಸಿಕ ಯುದ್ಧದಲ್ಲಿ ಗೆಲುವು ಸಾಧಿಸಲು ಪರಮಾತ್ಮನ ಸಂಬಂಧ ಬೇಕು ಎಂದು ತಿಳಿಸಿದರು.ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ ಮಾತನಾಡಿ, ಬಂಧನವನ್ನು ಯಾರೂ ಬಯಸುವುದಿಲ್ಲ. ಎಲ್ಲರೂ ಜೀವನದಲ್ಲಿ ಬಿಡುಗಡೆ ಬಯಸುತ್ತಾರೆ. ಆದರೆ, ಗೊತ್ತಿಲ್ಲದೇ ಅಥವಾ ಇಷ್ಟಪಟ್ಟು ಒಳಗಾಗುವ ಬಂಧನಗಳೂ ಇರುತ್ತವೆ. ಜಗತ್ತಿಗೆ ಶಾಂತಿ ಬಯಸುವ ಬಂಧನ ಬೇಕು. ಮನಃಶಾಂತಿ, ಸಮಾಧಾನ ಇರುವವರು ಸಮಾಜಕ್ಕೆ ಕೇಡು ಮಾಡುವುದಿಲ್ಲ. ಎಲ್ಲರಲ್ಲೂ ಸೋದರ ಭಾವ ಮೂಡಿದರೆ ಅನ್ಯಾಯ, ಅತ್ಯಾಚಾರ, ಅನಾಚಾರ ಸಂಪೂರ್ಣ ನಿಲ್ಲುತ್ತವೆ. ಶ್ರೀಕೃಷ್ಣನು ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಸಂದೇಶ ಸಾರಿದರು. ಪ್ರತಿಯೊಬ್ಬರೂ ಕರ್ಮಫಲ ತೊರೆದು ಕೆಲಸ ಮಾಡಿದರೆ ಸಮಾಜ ಸಮೃದ್ಧವಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಡಾ.ಸಂಪನ್ನ ಮುತಾಲಿಕ್, ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್, ತಾಲೂಕು ಬ್ರಾಹ್ಮಣ ಸಮಾಜ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರವಿಚಂದ್ರ, ಬ್ರಹ್ಮಕುಮಾರಿ ರಾಜೇಶ್ವರಿ ಇತರರು ಇದ್ದರು.ಅಭಿನಂದನೆ:
ಹಿರಿಯ ಲೇಖಕಿ ಡಾ.ರೂಪಶ್ರೀ ಶಶಿಕಾಂತ್ ಉಪನ್ಯಾಸ ನೀಡಿದರು. ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ, ಖಜಾಂಚಿ ಪವನ್ ಐರಣಿ, ಸಾರ್ವಜನಿಕ ಸಂಪರ್ಕ ಪ್ರತಿನಿಧಿ ಪಿ.ಎಸ್.ಲೋಕೇಶ್, ನಿಂಗರಾಜ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ಗೌರವ ಶ್ರೀರಕ್ಷೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಿಂಚನ ಮತ್ತು ಸಂಗಡಿಗರು ಸ್ವಾಗತ ನೃತ್ಯ ಮಾಡಿದರು. ಗೀತಕ್ಕ ಸ್ವಾಗತಿಸಿದರು. ಶಾಂತಕ್ಕ ವಂದನಾರ್ಪಣೆ ಮಾಡಿದರು. ಡಾ.ಬಿಸ್ನಳ್ಳಿ ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು.
- - -ಬಾಕ್ಸ್ * ರಕ್ಷಾಬಂಧನದಲ್ಲಿ ವಿಶ್ವ ಭ್ರಾತೃತ್ವ ಸಂದೇಶ ರಕ್ಷಾ ಬಂಧನವು ಸೋದರ ಭಾವನೆ ಪ್ರೇರೇಪಿಸುವ ಪವಿತ್ರ ಹಬ್ಬ. ಒಡಹುಟ್ಟಿದವರೊಂದಿಗೆ ಮಾತ್ರ ಈ ಭಾವನೆ ಸೀಮಿತವಲ್ಲ. ಸುತ್ತಲಿನ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡಬೇಕೆಂಬ ವಿಶ್ವಭ್ರಾತೃತ್ವದ ವಿಶಾಲ ಸಂದೇಶ ಹಬ್ಬದಲ್ಲಿದೆ. ಪಾರಮಾರ್ಥಿಕವಾಗಿ ನೋಡುವುದಾದರೆ, ಸಂಸಾರ ಬಂಧನದಿಂದ ಮುಕ್ತಗೊಂಡು ಪರಮಾತ್ಮನ ರಕ್ಷಣೆ ಪಡೆಯುವ ಹಬ್ಬವೇ ರಕ್ಷಾಬಂಧನ. ಹಬ್ಬದ ಸಂದರ್ಭದಲ್ಲಿ ಕೆಟ್ಟ ಅಭ್ಯಾಸ, ಹವ್ಯಾಸ ಕೈ ಬಿಟ್ಟು, ಜೀವನದಲ್ಲಿ ಒಳ್ಳೆಯ ಗುಣ ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಅವರು ಲೀಲಾಜಿ ಸಲಹೆ ನೀಡಿದರು.