ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸಿಎಂ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹುನ್ನಾರ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಆ.27 ರಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿದ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಅನಂತನಾಯಕ್ ತಿಳಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಒಂದು ಸ್ಥಿರ ಸರ್ಕಾರವನ್ನು ವಾಮ ಮಾರ್ಗದಿಂದ ಕೆಡೆವಿ, ಮಜಾ ತೆಗೆದುಕೊಳ್ಳಲು ಹೊರಟಿರುವ ಜೆಡಿಎಸ್-ಬಿಜೆಪಿ ಪಕ್ಷಗಳು, ಇದಕ್ಕೆ ರಾಜಭವನವನ್ನು ದುರುಪಯೋಗ ಪಡಿಸಿಕೊಂಡಿವೆ. ಹಾಗಾಗಿ ಶೋಷಿತ ಸಮುದಾಯಗಳ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯಬೇಕು ಎಂದರು. ರೈತರು, ಕಾರ್ಮಿಕರು, ದಲಿತರು, ಹಿಂದುಳಿದ ವರ್ಗಗಳ ಜನರು ಒಗ್ಗೂಡಿ ಜೆಡಿಎಸ್-ಬಿಜೆಪಿ ಕುತಂತ್ರವನ್ನು ಎದುರಿಸಬೇಕಾಗಿದೆ. ಆ.27ಕ್ಕೆ ರಾಜಭವನ ಮುತ್ತಿಗೆ ಹಾಕಿ ಗೋ ಬ್ಯಾಕ್ ಗೆಹಲೋಟ್ ಎಂಬ ಘೋಷಣೆ ಮೊಳಗಿಸಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ, ಮುಡಾ ಹಗರಣದಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲದಿದ್ದರೂ ಅವರನ್ನು ವಿನಾಕಾರಣ ಹಗರಣದಲ್ಲಿ ಸಿಲುಕಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ ಎಂದರು.ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಮೈಲಪ್ಪ ಮಾತನಾಡಿ, ನೇರವಾಗಿ ಜನಾಧಿಕಾರ ಪಡೆಯಲು ಸಾಧ್ಯವಾಗದ ಜೆಡಿಎಸ್-ಬಿಜೆಪಿ ಪಕ್ಷಗಳು ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿವೆ. ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಎಂತಹ ಹೋರಾಟಕ್ಕೂ ಸಮುದಾಯ ಸಿದ್ದವಿದೆ ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ಕೆಂಪರಾಜು ಮಾತನಾಡಿ, ಸಿದ್ದರಾಮಯ್ಯ ನಮ್ಮೆಲ್ಲರ ಮಹಾನಾಯಕ. ಅವರ ಘನತೆ ಗೌರವ ಉಳಿಸಲು ಎಂತಹ ಕಠಿಣ ತ್ಯಾಗಕ್ಕೂ ಸಿದ್ದವಿದ್ದೇವೆ. ಆ.27ರಂದು ನಡೆಯುವ ರಾಜ್ಯಭವನ ಚಲೋಗೆ ತುಮಕೂರು ಜಿಲ್ಲೆಯಿಂದ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುತಿದ್ದೇವೆ ಎಂದರು.ಟಿ.ಇ.ರಘುರಾಮ್, ಆದರ್ಶ ಯಲ್ಲಪ್ಪ, ಈರಣ್ಣ, ಹೆಬ್ಬೂರು ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.