ಕುಡಿವ ನೀರು ವ್ಯತ್ಯಯ ಆಗದಂತೆ ಗಮನಹರಿಸಿ

| Published : Apr 13 2024, 01:08 AM IST

ಸಾರಾಂಶ

ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ತಾಪಂ ಇಒಗಳು, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಹಾಗೂ ಪಿಡಿಒಗಳ ಜತೆ ಸಭೆ ನಡೆಸಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದು, ಮುಂಗಾರು ಆರಂಭದವರೆಗೆ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ನಿರ್ವಹಣೆ, ಮೇವಿನ ಪೂರೈಕೆ, ಬಿಸಿಗಾಳಿ ಕುರಿತು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಂಗಭದ್ರಾ ಮತ್ತು ಮಲಪ್ರಭಾ ನದಿ ಮೂಲಗಳಿಂದ ಕುಡಿಯುವ ನೀರು ಪೂರೈಕೆ, ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ, ಬೋರವೇಲ್‌ ಮೂಲಕ ಕುಡಿಯುವ ನೀರು ಪೂರೈಕೆ ಹೀಗೆ ವಿವಿಧ ಮೂಲಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕು. ಕುಡಿಯುವ ನೀರು ಸಂಗ್ರಹ ಮತ್ತಿತರ ಬಗ್ಗೆ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಸುದೀರ್ಫವಾಗಿ ಚರ್ಚಿಸಿದರು.

ಕುಡಿಯುವ ನೀರು ಪೂರೈಕೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಕುಡಿಯುವ ನೀರು ಸರಬರಾಜಿನಲ್ಲಿ ಸಾರ್ವಜನಿಕರಿಂದ ದೂರು ಬಾರದಂತೆ ಗಮನ ಹರಿಸುವುದು ಅಧಿಕಾರಿಗಳ ಪ್ರಥಮ ಆದ್ಯತೆ ಆಗಬೇಕು. ಕುಡಿಯುವ ನೀರಿನ ಪೂರೈಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ತಾಪಂ ಇಒಗಳು, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಹಾಗೂ ಪಿಡಿಒಗಳ ಜತೆ ಸಭೆ ನಡೆಸಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು.

ಕುಡಿಯುವ ನೀರು ಪೂರೈಕೆ ಗಂಭೀರವಾಗಿ ಪರಿಗಣಿಸಬೇಕು.

ಕುಡಿಯುವ ನೀರು ಪೂರೈಕೆಯಲ್ಲಿನ ನಿರ್ವಹಣೆ ಸರಿಯಾಗಿ ನಿಭಾಯಿಸಬೇಕು.ಪೈಪ್‍ಲೈನ್‍ಗಳನ್ನು ಆಗಾಗ ಪರಿಶೀಲಿಸಬೇಕು.ಕುಡಿಯುವ ನೀರು ಪೂರೈಸುವುದರ ಜತೆಗೆ ಗುಣಮಟ್ಟದ ಬಗ್ಗೆಯೂ ಪ್ರತಿನಿತ್ಯ ಪರಿಶೀಲಿಸಬೇಕು.ಯಾವುದೇ ಕಾರಣಕ್ಕೂ ಉದಾಸೀನ ತೋರಬಾರದು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಸಂಬಂಧ ಟ್ಯಾಂಕರ್ ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು.ಕುಡಿಯುವ ನೀರು ಪೂರೈಕೆ ಸಂದರ್ಭದಲ್ಲಿ ಛಾಯಾಚಿತ್ರ ಸಹಿತ ಮಾಹಿತಿ ಒದಗಿಸಬೇಕು. ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ವ್ಯತ್ಯಯ ಆಗಬಾರದು.ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮೇವು ಪೂರೈಕೆ ಸರಿಯಾಗಿ ನಿಭಾಯಿಸಬೇಕು ಎಂದರು.

ಜಿಪಂ ಸಿಇಒ ಎಸ್.ಭರತ್ ಮಾತನಾಡಿ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ಹಲವು ಕಡೆ ಖುದ್ದಾಗಿ ಭೇಟಿ ಪರಿಶೀಲಿಸಲಾಗುತ್ತಿದೆ. ತಾಪಂಇಒಗಳು ಕುಡಿಯುವ ನೀರು ಪೂರೈಕೆ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸೂಚಿಸಿದರು.

ತಹಸೀಲ್ದಾರರು, ತಾಪಂ ಇಒಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ನೀರಾವರಿ ಇಲಾಖೆಯ ಅಧಿಕಾರಿಗಳು ತುಂಗಭದ್ರ ಹಾಗೂ ಮಲಪ್ರಭಾ ನದಿಗಳಲ್ಲಿನ ನೀರು ಸಂಗ್ರಹ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ, ಉಪ ವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ನಗರಸಭೆ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.