ಸಾರಾಂಶ
ಹಾವೇರಿ: ಮಾನವನ ಜೀವನದ ಚಿರಂತನವಾದ ಸಮಸ್ಯೆಗೆ ಅಲ್ಲಮಪ್ರಭು ಶಾಶ್ವತವಾದ ಉತ್ತರವನ್ನು ಕೊಟ್ಟಿದ್ದಾನೆ. ಬಸವಣ್ಣನವರ ಸ್ವಾತಂತ್ರ್ಯ ಮನೋಧರ್ಮದ ವಿಚಾರಕ್ರಾಂತಿಗೆ ತನ್ನ ಜ್ಞಾನ, ವೈರಾಗ್ಯಗಳ ಕಾಂತಿಯನ್ನಿತ್ತು ಅದನ್ನು ಮುನ್ನಡೆಸಿದವನು ಅಲ್ಲಮಪ್ರಭು ಎಂದು ಪ್ರಭುಸ್ವಾಮಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.ತಾಲೂಕಿನ ಅಗಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದ ಪ್ರಭುಸ್ವಾಮಿಮಠಕ್ಕೂ ಅಲ್ಲಮಪ್ರಭುಗಳಿಗೆ ಅವಿನಾಭಾವ ಸಂಬಂಧ, ಲೋಕ ಸಂಚಾರ ಸಮಯದಲ್ಲಿ ಗ್ರಾಮಸ್ಥರ ಕೋರಿಕೆಯಂತೆ ಅಲ್ಲಮಪ್ರಭು ಆಗಮಿಸಿ ಈ ಮಠದಲ್ಲಿ ಅನುಷ್ಠಾನ ಗೈದ ತಪೋ ಭೂಮಿ ಈಮಠ. ಯುಗಾದಿ ದಿನದಂದೇ ಅವರ ಜಯಂತಿ ಬರುವುದು ವಿಶೇಷ. ಇಡಿ ಪ್ರಕೃತಿಗೆ ನವ್ಯತೆಯ ಮೆರಗನ್ನು ನೀಡುವ ಯುಗಾದಿ ನವ ಜೀವನಕ್ಕೆ ನಮ್ಮೆಲ್ಲರ ಪಾಲಿಗೆ ನಾಂದಿಯಾಗುತ್ತದೆ. ಯುಗಗಳಿಗೆ ಆದಿ ಯುಗಾದಿ ಪರಿವರ್ತನೆಯ ಪರ್ವಕಾಲವದು ಎಂದರು. ಅಗಡಿ ಆನಂದವನದ ಗುರುದತ್ತ ಚಕ್ರವರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಜ್ಞಾನದ ಈ ಯುಗದಲ್ಲಿ ಆಂತರಿಕ ಅನ್ವೇಷಣೆಗಿಂತ ಬಾಹ್ಯದ ಬೆಡಗಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಸುಖದ ಬಿಸಿಲು ಕುದುರೆಯ ಬೆನ್ನು ಹತ್ತುವಾಗ ಜೀವನ ಮೌಲ್ಯಗಳನ್ನು ಗಾಳಿಗೆ ತೂರಿದ್ದೇವೆ. ಅಗಡಿ ಶಾಂತಿ, ಸಾಮರಸ್ಯ, ಸೌಹಾರ್ದ, ಭಾವೈಕ್ಯತೆಯ ಶ್ರದ್ಧಾಕೇಂದ್ರ, ಜೀವನ ದರ್ಶನ ಪ್ರವಚನ ಗ್ರಾಮಸ್ಥರನ್ನು ಜಾಗೃತಗೊಳಿಸಿದೆ, ದೇವಸ್ಥಾನ ಸಮಿತಿಯವರ ಈ ಕಾರ್ಯ ಶ್ಲಾಘನೀಯ ಎಂದರು. ೧೧ ದಿನಗಳ ಕಾಲ ಪ್ರವಚನ ಮಾಡಿದ ಶರಣೆ ಜಯಶ್ರೀ ದೇವಿ, ನಿವೃತ್ತ ಯೋಧರು, ಡಾ. ಮಧು ಲೋಕಿಕೆರೆ, ಡಾ.ನೂತನ ಅವರನ್ನು ಹಾಗೂ ಸೇವಾರ್ಥಿಗಳನ್ನು ಸಮಿತಿಯವರು ಗೌರವಿಸಿದರು. ಸಮಿತಿಯ ಅಧ್ಯಕ್ಷ ಬಸಪ್ಪ ಬಳಲಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಯೋಧರ ಒಕ್ಕೂಟದ ಅಧ್ಯಕ್ಷ ಬಸವರಾಜ ಕಡ್ಲಿ, ಪ್ರಭಣ್ಣ ಮರಗೂರ, ಪ್ರಗತಿಪರ ರೈತ ಶಿವಪುತ್ರಪ್ಪ ಶಿವಣ್ಣನವರ, ನಿವೃತ್ತ ಶಿಕ್ಷಕ ಶಿವಮಮೂರ್ತೆಪ್ಪ ಪಟ್ಟಣಶೆಟ್ಟಿ ಇತರರು ಇದ್ದರು. ಶಿವಪ್ಪ ಬಾಳಲಕೊಪ್ಪ ಸ್ವಾಗತಿಸಿದರು. ನ್ಯಾಯವಾದಿ ಮಾಂತೇಶ ಮೂಲಿಮನಿ ನಿರೂಪಿಸಿದರು. ಮಂಜಯ್ಯ ಹಿರೇಮಠ ವಂದಿಸಿದರು.