ಸಾರಾಂಶ
ರೈತರು, ಸಾರ್ವಜನಿಕರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಿ ವೇಳೆ ಸೌಜನ್ಯದಿಂದ ವರ್ತಿಸದಿದ್ದರೆ ಅವರ ವಿರುದ್ಧ ರೈತಸಂಘದಿಂದ ಹಳ್ಳಿ ಹಳ್ಳಿಯಲ್ಲೂ ಚಳವಳಿ ರೂಪಿಸಬೇಕಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು, ಸಾರ್ವಜನಿಕರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಿ ವೇಳೆ ಸೌಜನ್ಯದಿಂದ ವರ್ತಿಸದಿದ್ದರೆ ಅವರ ವಿರುದ್ಧ ರೈತಸಂಘದಿಂದ ಹಳ್ಳಿ ಹಳ್ಳಿಯಲ್ಲೂ ಚಳವಳಿ ರೂಪಿಸಬೇಕಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು.ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಖಡಕ್ ಸೂಚನೆ ನೀಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳದ್ದು ದೊಡ್ಡ ಸಮಸ್ಯೆಯಾಗಿದೆ. ರೈತರು, ಸಾರ್ವಜನಿಕರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಾತಿ ಮಾಡುವಾಗ ದಬ್ಬಾಳಿಕೆ, ಒತ್ತಡ ಹಾಕುವುದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಕ್ರೋ ಫೈನಾನ್ಸ್‌ಗಳಿಗೆ ಹೆದರಿ ಸಾರ್ವಜನಿಕರು ಊರುಗಳನ್ನೇ ಬಿಟ್ಟು ಬೇರೆಡೆ ಗುಳೆ ಹೋಗುವ ಸ್ಥಿತಿ ಎದುರಾಗಿದೆ. ಇದರಿಂದ ಆ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ನೀಡುವ ಮೊದಲ, ಸಾಲ ಪಡೆಯುತ್ತಿರುವ ಗ್ರಾಹಕರಿಗೆ ಸಾಲದ ಅವಶ್ಯಕತೆ ಇದೆಯಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು. ಸಾಲ ಪಡೆಯುತ್ತಿರುವ ವ್ಯಕ್ತಿಗಳ ಸಾಲದ ಹಣವನ್ನು ಅವರ ಅವಶ್ಯಕತೆಗೆ ಬಳಕೆ ಮಾಡಿಕೊಳ್ಳುತ್ತಾರೆಯೇ?, ಸಾಲ ಪಡೆದು ಬೇರೆಯವರಿಗೆ ನೀಡುತ್ತಾರಾ? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ಸಾಲ ನೀಡಬೇಕು ಎಂದರು.
ನಿಮ್ಮಿಂದ ಸಾಲಪಡೆಯುವ ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದಾರೆ. ಹಾಗಾಗಿ ಅವರಿಗೆ ಸಾಲ ಹಾಗೂ ಹಣದ ಮಹತ್ವ, ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮೈಕ್ರೋ ಫೈನಾನ್ಸ್ ಕಂಪನಿಗಳು ಮಾಡಬೇಕು ಎಂದರು.ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರ:
ಪಟ್ಟಣದ ಕಸಬಾ ಸೊಸೈಟಿ ಸೇರಿದಂತೆ ತಾಲೂಕಿನ ಸಾಕಷ್ಟು ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರ ನಡೆದು ಸಹಕಾರ ನಿಯಮದ 64 ಕಾಯ್ದೆಯಡಿ ತನಿಖೆ ನಡೆಯುತ್ತಿವೆ. ಭ್ರಷ್ಟಾಚಾರ ನಡೆಸಿದ ವ್ಯಕ್ತಿಗಳು 64 ಕಾಯ್ದೆಯಡಿ ತನಿಖೆ ನಡೆಯುತ್ತಿದ್ದರೆ ಅದು ಮುಗಿಯುವವರೆಗೂ ಭ್ರಷ್ಟಾಚಾರಿಗಳು ಅರಾಮವಾಗಿ ಓಡಾಡಿಕೊಂಡು ಇರಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಸಹಕಾರ ಸಂಘಗಳ ಕಾಯ್ದೆಗಳಿಗೆ ತಿದ್ದುಪಡಿ ತರಬೇಕಾದ ಅವಶ್ಯಕತೆ ಇದೆ. ಕಸಬಾ ಸೊಸೈಟಿಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ನಡೆಯುತ್ತಿದೆ, ಸ್ವಲ್ಪ ವಸೂಲಾತಿ ಮಾಡಲಾಗಿದೆ. ಅವರು ವಿರುದ್ಧ ಎಫ್‌ಐಆರ್ ಸಹ ದಾಖಲಿಸಲಾಗಿದೆ ಎಂದರು.ಬೇಬಿಬೆಟ್ಟ ಜಾತ್ರೆ ಆರಂಭ:
ತಾಲೂಕಿನ ಬೇಬಿ ಬೆಟ್ಟದಲ್ಲಿ ಫೆ.26 ರಿಂದ ಮಾರ್ಚ್ 5 ರವರೆಗೆ ಬಾರಿ ದನಗಳ ಜಾತ್ರೆ ನಡೆಯಲಿದೆ. ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ ರಾಸುಗಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಮಾರ್ಚ್ 2ರಂದು ಉಚಿತ ಸರಳ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ ಎಂದರು.ಸಭೆಯಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಪುರಸಭೆ ಸದಸ್ಯ ಶಿವಕುಮಾರ್, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್ ಹಾಜರಿದ್ದರು.